ಬೆಂಗಳೂರು: ನಗರದಲ್ಲಿ ಸಂಚಾರ ಸಮಸ್ಯೆ ತಗ್ಗಿಸುವ ನಿಟ್ಟಿನಲ್ಲಿ ಐದು ಹೊಸ ಸಂಚಾರ ಪೊಲೀಸ್ ಠಾಣೆ ಆರಂಭಕ್ಕೆ ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ನಗರದ ಬ್ರಾಡ್‌ವೇ ರಸ್ತೆಯಲ್ಲಿ ನಿರ್ಮಿಸಿರುವ ಪೂರ್ವ ವಿಭಾಗದ ಉಪ ಪೊಲೀಸ್ ಆಯುಕ್ತರ ನೂತನ ಕಚೇರಿ ಕಟ್ಟಡ ಉದ್ಘಾಟನೆ, ಐಟಿಎಂಎಸ್ ಗೆ ಚಾಲನೆ ನೀಡಿ ಮಾತನಾಡಿದರು.ಇನ್ನು ಮೂರು ದಿನಗಳಲ್ಲಿ ಹೊಸ ಠಾಣೆಗಳಿಗೆ ಮಂಜೂರಾತಿ ನೀಡಲಿದ್ದೇವೆ ಎಂದರು.
ನಗರದಲ್ಲಿ ಸಂಚಾರ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಮೊದಲ ಬಾರಿಗೆ ಸಂಚಾರ ವಿಭಾಗಕ್ಕೆ ವಿಶೇಷ ಆಯುಕ್ತ ಹುದ್ದೆ ಸೃಷ್ಟಿಸಲಾಗಿದೆ. ನಗರದ ಟ್ರಾಫಿಕ್ ಸಮಸ್ಯೆ ಬಗ್ಗೆ ಚೆನ್ನಾಗಿ ಅರಿತಿರುವ ಹಿರಿಯ ಅಧಿಕಾರಿ ಡಾ. ಎಂ.ಎ.ಸಲೀಂ ಅವರನ್ನು ವಿಶೇಷ ಆಯುಕ್ತರಾಗಿ ನೇಮಿಸಲಾಗಿದೆ. ಕೆಲವೇ ದಿನಗಳಲ್ಲಿ ನಗರದ ಸಂಚಾರ ವ್ಯವಸ್ಥೆಯಲ್ಲಿ ಸಾಕಷ್ಟುಬದಲಾವಣೆ ತಂದಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇನ್ನು ಸಂಚಾರ ದಟ್ಟಣೆ ಹೆಚ್ಚಿರುವ ಗೊರಗುಂಟೆಪಾಳ್ಯ, ಕೆ.ಆರ್.ಪುರಂ. ಸಿಲ್ಕ್ ಬೋರ್ಡ್ ಜಂಕ್ಷನ್ ಸೇರಿದಂತೆ ನಗರದ 12 ಹೈಡೆನ್ಸಿಟಿ ಕಾರಿಡಾರ್‌ಗಳಲ್ಲಿ ಸಂಚಾರ ದಟ್ಟಣೆ ತಗ್ಗಿಸಲು ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಮುಂದಿನ ದಿನಗಳಲ್ಲಿ ನಗರದ ರಸ್ತೆಗಳ ಅಭಿವೃದ್ಧಿ ಜತೆಗೆ ಸಂಚಾರ ಸಮಸ್ಯೆಗಳ ನಿವಾರಣೆಗೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಂಡು ವಾಹನ ಸಂಚಾರ ನಿಯಮ ಉಲ್ಲಂಘನೆಗೆ ದಂಡ ವಿಧಿಸುವ ನಿಟ್ಟಿನಲ್ಲಿ ಐಟಿಎಂಎಸ್ ವ್ಯವಸ್ಥೆ ಆರಂಭಿಸಲಾಗಿದೆ. ಈ ವ್ಯವಸ್ಥೆಯಿಂದ ಚಾಲಕರಿಗೆ ದಂಡ ವಿಧಿಸುವಾಗ ಭ್ರಷ್ಟಾಚಾರ ಹಾಗೂ ಪೊಲೀಸರ ದೌರ್ಜನ್ಯದ ಆರೋಪಗಳಿಗೆ ಅವಕಾಶವಿಲ್ಲ. ಇದರ ಜತೆಗೆ ಸಂಚಾರ ಸಮಸ್ಯೆ ಸುಧಾರಣೆಗೆ ಹಲವು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.