ಮಂಡ್ಯ : ರೈತರ ಪ್ರತಿಭಟನೆ ಮುಂದುವರಿದಿರುವ ನಡುವೆ ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸುವುದನ್ನು ಸರ್ಕಾರ ನಿಲ್ಲಿಸಿದೆ.
ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ 75 ಸಾವಿರ ಕ್ಯೂಸೆಕ್ ನೀರು ತಮಿಳುನಾಡಿಗೆ ಬಿಡುವಂತೆ ಕರ್ನಾಟಕ ಸರ್ಕಾರಕ್ಕೆ ಸೂಚಿಸಿತ್ತು. ಕಳೆದ 10 ದಿನದಲ್ಲಿ 62 ಸಾವಿರ ಕ್ಯೂಸೆಕ್ ನೀರು ಕೆಆರ್ ಎಸ್ ಡ್ಯಾಂನಿಂದ ತಮಿಳುನಾಡಿಗೆ ಹರಿಸಲಾಗಿದೆ. ಪ್ರಾಧಿಕಾರ ಸೂಚಿಸಿದ ಕೋಟಾ ಬಹುತೇಕ ಪೂರ್ಣಗೊಂಡಿರುವ ಹಿನ್ನೆಲೆ ಸರ್ಕಾರ ನೀರು ಬಿಡುವುದನ್ನು ಸ್ಥಗಿತಗೊಳಿಸಿದೆ.
ಕಳೆದ ಮೂರು ದಿನಗಳಿಂದ ಡ್ಯಾಂ ಕೆಳ ಭಾಗದ ಪ್ರದೇಶದಲ್ಲಿ ಮಳೆಯಾಗ್ತಿದೆ. ಈ ಮೂಲಕ ಸುಮಾರು 11 ಸಾವಿರ ಕ್ಯೂಸೆಕ್ ನೀರು ಮಳೆ ರೂಪದಲ್ಲಿ ತಲುಪಿದಿದೆ. ಮಳೆ ನೀರು ಮತ್ತು ಡ್ಯಾಂ ನೀರು ಸೇರಿ ಪ್ರಾಧಿಕಾರ ಸೂಚಿಸಿದ ಕೋಟಾ ಮುಕ್ತಾಯವಾಗಿದೆ ಎಂದು ಎಂದು ಕರ್ನಾಟಕ ಸರ್ಕಾರ ಅಂದಾಜಿಸಿದೆ. ಹಾಗಾಗಿ, ಇಂದಿನಿಂದ ತಮಿಳುನಾಡಿಗೆ ನೀರು ಸ್ಥಗಿತಗೊಳಿಸಿ ನಾಲೆಗಳಿಗೆ ನೀರು ಬಿಡುಗಡೆ ಮಾಡಿದೆ. ರೈತರ ಹೋರಾಟಕ್ಕೆ ಮಣಿದ ಸರ್ಕಾರ ಸದ್ಯ 2ನೇ ಕಟ್ಟಿನಲ್ಲಿ ನಾಲೆಗಳಿಗೆ ನೀರು ಹರಿಸಿದೆ.
ಇದನ್ನೂ ಓದಿ : ಕಾವೇರಿ ಜಲ ವಿವಾದ : ಅರ್ಜಿ ವಿಚಾರಣೆ ಮುಂದೂಡಿದ ಸುಪ್ರೀಂ ಕೋರ್ಟ್
ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ವಿರೋಧಿಸಿ ಮಂಡ್ಯದಲ್ಲಿ ಶಾಸಕರ ದರ್ಶನ್ ಪುಟ್ಟಣ್ಣಯ್ಯ ನೇತೃತ್ವದ ರೈತರ ತಂಡ ಸೇರಿದಂತೆ ಹಲವು ಸಂಘಟನೆಗಳು ಪ್ರತಿಭಟನೆ ನಡೆಸಿವೆ. ಇಂದೂ ಕೂಡ ಜಿಲ್ಲೆಯಾದ್ಯಂತ ಹಲವೆಡೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಕಾವೇರಿ ಜಲ ವಿವಾದ ಸಂಬಂಧ ಸುಪ್ರೀಂ ಕೋರ್ಟ್ ಗೆ ತಮಿಳುನಾಡು ಮತ್ತು ಕರ್ನಾಟಕ ಸರ್ಕಾರಗಳು, ರೈತ ಸಂಘ ಮತ್ತು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಸಲ್ಲಿಸಿರುವ ಅರ್ಜಿ ವಿಚಾರಣೆಗೆ ಬಾಕಿಯಿದೆ. ಸೋಮವಾರ ತಮಿಳುನಾಡು ಸರ್ಕಾರದ ಅರ್ಜಿ ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್ ಪೀಠ ವಿಚಾರಣೆಯನ್ನು ಸೆಪ್ಟೆಂಬರ್ 21ಕ್ಕೆ ಮುಂದೂಡಿದೆ. ಈ ನಡುವೆ ಸರ್ಕಾರ ನೀರು ಹರಿಸುವುದನ್ನು ನಿಲ್ಲಿಸಿರುವ ಬಗ್ಗೆ ಮಾಹಿತಿ ಹೊರ ಬಿದ್ದಿದೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.