ಬೆಂಗಳೂರು : ರಾಜ್ಯಾದ್ಯಂತ ಏಕಕಾಲಕ್ಕೆ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿರುವ ‘ಗೃಹಲಕ್ಷ್ಮಿ’ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದು ಮೈಸೂರಿನಲ್ಲಿ ಬಟನ್ ಒತ್ತುವ ಮೂಲಕ ಅಧಿಕೃತವಾಗಿ ಚಾಲನೆ ನೀಡಿದ್ದಾರೆ.
ಲೋಕಸಭಾ ಚುನಾವಣೆಯ ದಿಕ್ಸೂಚಿ ಕಾರ್ಯಕ್ರಮವೆಂಬಂತೆ ಬಿಂಬಿಸಲಾಗಿರುವ ‘ಗೃಹಲಕ್ಷ್ಮಿ’ಯೋಜನೆ ಲೋಕಾರ್ಪಣೆಯ ನೇರ ಪ್ರಸಾರವನ್ನು ರಾಜ್ಯದ ಪ್ರತಿಯೊಂದು ಗ್ರಾಮ ಪಂಚಾಯತಿ ಮಟ್ಟದಲ್ಲಿ ಸಾರ್ವಜನಿಕರಿಗೆ ವೀಕ್ಷಿಸಲು ಸರ್ಕಾರ ವ್ಯವಸ್ಥೆ ಮಾಡಿದ್ದು ಯಾವ್ಯಾವ ಜಿಲ್ಲೆಯಲ್ಲಿ ಹೇಗೆ ಜನರ ಮನೆ ಬಾಗಿಲಿಗೆ ಗೃಹಲಕ್ಷ್ಮಿ ಒಲಿದಳು ಎಂಬುದು ಇಲ್ಲಿದೆ ನೋಡಿ!..


ಯಾದಗಿರಿ : ಜಿಲ್ಲೆಯಲ್ಲಿ ಗೃಹಲಕ್ಷ್ಮಿ ಯೋಜನೆಗೆ ದೀಪ ಬೆಳಗಿಸುವ ಮೂಲಕ ಸಣ್ಣ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಶರಣಬಸ್ಸಪ್ಪಗೌಡ ದರ್ಶನಾಪುರ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಯಾದಗಿರಿ ವಿಧಾನಸಭಾ ಕ್ಷೇತ್ರದ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರ್ ಜಿಲ್ಲಾಧಿಕಾರಿ ಡಾ. ಸುಶೀಲಾ ಬಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗರಿಮಾ ಪನ್ವಾರ್ ಹಾಗೂ ಪೋಲಿಸ್ ವರಿಷ್ಠಾಧಿಕಾರಿ ಡಾ. ಸಿಬಿ ವೇದಮೂರ್ತಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಸೇರಿದಂತೆ ಜಿಲ್ಲೆಯ ಸಾವಿರಾರು ಮಹಿಳೆಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಬೀದರ : ಕಾಂಗ್ರೆಸ್ ಸರ್ಕಾರದ ನಿರೀಕ್ಷಿತ ಯೋಜನೆಯಾಗಿರುವ ‘ಗೃಹಲಕ್ಷ್ಮಿ’ ಯೋಜನೆಗೆ ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆಯವರಿಗೆ ಸಾಥ್ ನೀಡಿ ಮಹಿಳೆಯರೂ ಸಹ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.


ಕಾರ್ಯಕ್ರಮದಲ್ಲಿ ಸಚಿವ ರಹೀಂಖಾನ್, ಪರಿಷತ್ ಸದಸ್ಯ ಅರವಿಂದ್ ಅರಳಿ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಭಾಗಿಯಾಗಿದ್ದರು. ಸಾವಿರಾರು ‘ಗೃಹಲಕ್ಷ್ಮಿ’ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಉತ್ತರ ಕನ್ನಡ : ಕಾರವಾರದ ಪೊಲೀಸ್ ಸಭಾ ಭವನದಲ್ಲಿ ‘ಗೃಹಲಕ್ಷ್ಮಿ’ ಯೋಜನೆಗೆ ದೀಪ ಪ್ರಜ್ವಲಿಸುವ ಮೂಲಕ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಚಾಲನೆ ನೀಡಿದರು. ಜಿಲ್ಲೆಯಲ್ಲಿ ಈಗಾಗಲೇ ನೊಂದಾಯಿಸಿರುವ 2,96,145 ಮಂದಿ ಮಹಿಳೆಯರಿಗೆ 69ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಯೋಜನೆಗೆ ಚಾಲನೆಗೂ ಮುನ್ನ ಕಾಲ್ನಡಿಗೆಯಲ್ಲಿ ಸರ್ಕಾರದ ‘ಗೃಹ ಲಕ್ಷ್ಮೀ’ ಯೋಜನೆಯ ಬ್ಯಾನರ್ ಹಿಡಿದು ಮೆರವಣಿಗೆಯ ಮೂಲಕ ಸಾವಿರಾರು ಮಹಿಳೆಯರು ಆಗಮಿಸಿದರು. ಡಮಾಮಿ, ಡೊಳ್ಳು ಕುಣಿತ ಸೇರಿದಂತೆ ವಿವಿಧ ವಾದ್ಯಗಳು ಮೆರವಣಿಗೆಯಲ್ಲಿ ಮೇಳೈಸಿದವು. ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್, ಶಾಸಕ ಸತೀಶ್ ಸೈಲ್ ಸೇರಿದಂತೆ ಇತರ ಗಣ್ಯರು ಭಾಗಿಯಾಗಿದ್ದರು.


ಚಿತ್ರದುರ್ಗ : ನಗರದ ತರಾಸು ರಂಗಮಂದಿರದಲ್ಲಿ ‘ಗೃಹಲಕ್ಷ್ಮಿ’ ಯೋಜನೆಗೆ ಜಿಲ್ಲಾ ಉಸ್ತುವಾರಿ ಮಂತ್ರಿ ಡಿ.ಸುಧಾಕರ್ ಚಾಲನೆ ನೀಡಿ ನೂರಾರು ಫಲಾನುಭವಿಗಳಿಗೆ ಮಂಜೂರಾತಿ ಪತ್ರ ವಿತರಿಸಿದರು. ಕಾರ್ಯಕ್ರಮದಲ್ಲಿ ಶಾಸಕ ಕೆ.ಸಿ.ವೀರೇಂದ್ರ, ಜಿಲ್ಲಾಧಿಕಾರಿ ದಿವ್ಯಪ್ರಭು, ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರ ಕುಮಾರ್ ಮೀನಾ ಸೇರಿ ಹಲವರು ಭಾಗಿಯಾಗಿದ್ದರು.


ಕೊಪ್ಪಳ : ನಗರದ ಸಾಹಿತ್ಯ ಭವನದಲ್ಲಿ ‘ಗೃಹಲಕ್ಷ್ಮೀ’ ಯೋಜನೆಗೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು. ಶಾಸಕ ರಾಘವೇಂದ್ರ ಹಿಟ್ನಾಳ್ ಸೇರಿದಂತೆ ಕಾರ್ಯಕ್ರಮದಲ್ಲಿ ಯೋಜನೆಯ ನೂರಾರು ಮಹಿಳೆಯರು ಭಾಗಿಯಾಗಿದ್ದರು.
ಬಾಗಲಕೋಟೆ : ನಗರದ ಕಲಾಭವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಜ್ಯೋತಿ ಬೆಳಗಿಸುವ ಮೂಲಕ ಸರ್ಕಾರದ ಮಹತ್ವದ ಯೋಜನೆಯಾಗಿರುವ ‘ಗೃಹಲಕ್ಷ್ಮಿ’ಗೆ ಲೋಕಾಪರ್ಣೆಗೊಳಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲೆಯ ಶಾಸಕರು ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳು ನೂರಾರು ಮಹಿಳೆಯರು ಮತ್ತು ಸಾರ್ವಜನಿಕರು ಭಾಗಿಯಾಗಿದ್ದರು.
ದಾವಣಗೆರೆ : ಸರ್ಕಾರದ ಗ್ಯಾರಂಟಿಗಳಲ್ಲೊಂದಾಗಿರುವ ‘ಗೃಹ ಲಕ್ಷ್ಮಿ’ ಯೋಜನೆಗೆ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಚಾಲನೆ ನೀಡಿದರು. ನಗರದ ಶಾಮನೂರು ಶಿವಶಂಕರಪ್ಪ ಕಲ್ಯಾಣ ಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ, ಎಸ್ಪಿ ಸೇರಿದಂತೆ ಹಲವು ಇಲಾಖೆ ಅಧಿಕಾರಿಗಳು ಭಾಗಿಯಾಗಿದ್ದರು. ಜಿಲ್ಲೆಯಲ್ಲಿ ಇದುವರೆಗೂ 3 ಲಕ್ಷಕ್ಕೂ ಅಧಿಕ ಮಹಿಳೆಯರು ಈ ಯೋಜನೆಗೆ ನೋಂದಣಿ ಮಾಡಿಕೊಂಡಿರುವ ಸಂತಸದಲ್ಲಿದ್ದಾರೆ.
ಇದೊಂದು ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಉಪಯೋಗವಾಗುವಂತ ಯೋಜನೆ. ಈ ಯೋಜನೆ ಮೂಲಕ ಮನೆಯ ಯಜಮಾನಿಗೆ ಪ್ರತಿ ತಿಂಗಳು 2 ಸಾವಿರ ರೂಪಾಯಿ ನೀಡಲಾಗುತ್ತದೆ. ನಮ್ಮ ಜಿಲ್ಲೆಯಲ್ಲಿ ಸುಮಾರು 3 ಲಕ್ಷ ಮಹಿಳೆಯಾರು ನೋಂದಣಿ ಮಾಡಲಾಗಿದೆ. ನೂರರಷ್ಟು ಈ ಯೋಜನೆ ಫಲನುಭವಿಗಳಿಗೆ ತಲುಪಿಸುವ ಕೆಲಸ ಮಾಡುತ್ತೇವೆ ಎಂದು ಸಚಿವ ಮಲ್ಲಿಕಾರ್ಜುನ ತಿಳಿಸಿದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.