ಬೆಂಗಳೂರು: ರೈತರ ವಿರೋಧ ನಡುವೆಯೇ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶಕ್ಕೆ ಮಣಿದ ರಾಜ್ಯ ಸರ್ಕಾರ, ಬುಧವಾರದಿಂದಲೇ ತಮಿಳುನಾಡಿಗೆ ಕಾವೇರಿ ನದಿ ನೀರು ಬಿಡುಗಡೆ ಮಾಡಿದೆ.
ತಮಿಳುನಾಡಿಗೆ ನೀರು ಹರಿಸಲು ಕಾವೇರಿ ನೀರಾವರಿ ಪ್ರಾಧಿಕಾರ ಆದೇಶ ಹಿನ್ನಲೆ ಕೆಆರ್ಎಸ್ ಡ್ಯಾಂನಿಂದ ನದಿಗೆ ನೀರು ಬಿಡಲಾಗುತ್ತಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ : ಪ್ರಿಯಾಂಕ್ ಖರ್ಗೆಗೆ 5 ಸಾವಿರ ರೂ. ದಂಡ : ಸಚಿವರು ಮಾಡಿದ ತಪ್ಪೇನು?
ಪ್ರಾಧಿಕಾರದ ಆದೇಶವನ್ನು ಪಾಲನೆ ಮಾಡಿ ರಾಜ್ಯ ಸರ್ಕಾರ, ನಿತ್ಯ 5 ಸಾವಿರ ಕ್ಯೂಸೆಕ್ ನೀರಿನಂತೆ, ಮುಂದಿನ 15 ದಿನಗಳ ಕಾಲ ತಮಿಳುನಾಡಿಗೆ ನೀರು ಬಿಡುಗಡೆ ಮಾಡಬೇಕಿದೆ.
ಸೆ.12 ರವರೆಗೆ 15 ದಿನಗಳ ಕಾಲ ಕರ್ನಾಟಕ – ತಮಿಳುನಾಡು ಗಡಿಯಲ್ಲಿನ ಬಿಳಿಗೊಂಡ್ಲು ಜಲಾಶಯಕ್ಕೆ ಪ್ರತಿದಿನ 5,000 ಕ್ಯೂಸೆಕ್ ಕಾವೇರಿ ನೀರನ್ನು ಬಿಡುಗಡೆಗೊಳಿಸುವಂತೆ ಸಿಡಬ್ಲುಎಂಎ ಮಂಗಳವಾರ ಕರ್ನಾಟಕಕ್ಕೆ ನಿರ್ದಶನ ನೀಡಿತ್ತು.
ಕರ್ನಾಟಕವು ಇದನ್ನು ಬಲವಾಗಿ ವಿರೋಧಿಸಿತ್ತಾದರೂ 5,000 ಕ್ಯೂಸೆಕ್ ನೀರು ಬಿಡುಗಡೆಗೆ ಕಾವೇರಿ ಜಲ ನಿಯಂತ್ರಣ ಸಮಿತಿಯ ಶಿಫಾರಸುಗಳನ್ನು ಸಿಡಬ್ಲುಎಂಎ ಎತ್ತಿ ಹಿಡಿದಿತ್ತು.
ಇನ್ನು ಈ ಬಗ್ಗೆ ಮಾತನಾಡಿರುವ ಮಾಜಿ ನೀರಾವರಿ ಸಚಿವ ಗೋವಿಂದ ಕಾರಜೋಳ, ನಮ್ಮ ಕಾಲದಲ್ಲಿ ತಮಿಳುನಾಡಿಗೆ ಬಿಟ್ಟ ನೀರಿನ ದಾಖಲೆ ಬಿಡುಗಡೆ ಮಾಡಲಿ ಎಂದು ಡಿಸಿಎಂ ಡಿಕೆ ಶಿವಕುಮಾರ್ ಗೆ ತಿರುಗೇಟು ನೀಡಿದ್ದಾರೆ.
ನಮ್ಮ ಕಾಲದಲ್ಲಿ ರೈತರಿಗೆ ನೀರು ಇಟ್ಟುಕೊಂಡೇ, ತಮಿಳುನಾಡಿಗೆ ನೀರು ಬಿಟ್ಟಿದ್ದೇವೆ. ನಾವು ಅಧಿಕಾರದಲ್ಲಿದ್ದಾಗ ರೈತರು ಏನು ಪ್ರತಿಭಟನೆ ಮಾಡಿದ್ರಾ? ಸುಮ್ಮನೆ ರಾಜಕೀಯಕ್ಕಾಗಿ ಏನೋ ಮಾತಾಡೋದು ಸರಿಯಲ್ಲ. ಡಿಕೆ ಶಿವಕುಮಾರ್ ಅದೇನೋ ಬಿಚ್ಚಿಡ್ತಾರೋ ಬಿಚ್ಚಿಡಲಿ. ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ, ರೈತರ ಬಗ್ಗೆ, ಅಭಿವೃದ್ದಿ ಬಗ್ಗೆ ಗಮನ ಕೊಡುತ್ತಿಲ್ಲ. ಕೇವಲ ವೋಟ್ ಬ್ಯಾಂಕ್ ರಾಜಕಾರಣ ಮಾಡಿಕೊಂಡು ಬರ್ತಿದೆ. ಮುಂಗಾರು ಮಳೆ ಕೊರತೆಯಾದಾಗಲೇ ಸರ್ಕಾರ ಎಚ್ಚೆತ್ತುಕೊಳ್ಳಬೇಕಿತ್ತು. ತಮಿಳುನಾಡಿಗೆ ಎಷ್ಟು ನೀರು ಬಿಡಬೇಕು ಎಂದು ಎಚ್ಚೆತ್ತುಕೊಳ್ಳಬೇಕಿತ್ತು. ಸಿಡಬ್ಲುಎಂಎ ಮತ್ತು ಸಿಡಬ್ಲುಆರ್ ಸಿಗಳಿಗೆ ಮನವರಿಕೆ ಮಾಡಿಕೊಡುವಲ್ಲಿ ಸರ್ಕಾರ ವಿಫಲವಾಗಿದೆ. ಈಗಾಗಲೇ ಸರ್ಕಾರ ತಮಿಳುನಾಡಿಗೆ ನೀರು ಹರಿದಿದೆ. ಮೊದಲು 10 ಸಾವಿರ ಕ್ಯೂಸೆಕ್ ನೀರು ಬಿಟ್ಟಿದ್ದೇ ತಪ್ಪು. ಆಗಲೇ ಎಚ್ಚೆತ್ತು ಕಾನೂನು ಹೋರಾಟಕ್ಕೆ ಸಿದ್ದವಾಗಬೇಕಿತ್ತು. ಕಾವೇರಿ ಜಲಾನಯದ ಹಲವು ಹಳ್ಳಿಗಳು, ಬೆಂಗಳೂರು ನಗರ ಕಾವೇರಿ ಮೇಲೆಯೇ ಅವಲಂಬಿತವಾಗಿವೆ. ಈಗಲೂ ರಾಜ್ಯ ಸರ್ಕಾರ ತಮ್ಮ ಕಾನೂನು ತಂಡವನ್ನು ಸಿದ್ದಮಾಡಿ ನ್ಯಾಯಾಲಯಕ್ಕೆ ಮನವರಿಕೆ ಮಾಡಿ ನೀರು ಹರಿಸುವುದನ್ನ ನಿಲ್ಲಿಸಲಿ ಎಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ : ಹೆಚ್‌ಡಿಕೆ ಆರೋಗ್ಯ ವಿಚಾರಿಸಿದ ನಿರ್ಮಲಾನಂದನಾಥ ಸ್ವಾಮೀಜಿ
ಇನ್ನು ಮುಂದುವರೆದು ಮಾತನಾಡಿದ ಅವರು, ಕಾವೇರಿ ನೀರಿನ ರೈತರ ಹೋರಾಟಕ್ಕೆ ಬಿಜೆಪಿಯ ಬೆಂಬಲ ಇರಲಿದೆ. ಕಾಂಗ್ರೆಸ್ ಸರ್ಕಾರದ್ದು ಇಬ್ಬಾಗ ನೀತಿ, ಪ್ರತಿಪಕ್ಷದಲ್ಲಿ ಇದ್ದಾಗ ಮೇಕೆದಾಟು ಪಾದಯಾತ್ರೆ ಮಾಡಿದ್ರು. ಇವರದ್ದು ಇಬ್ಬಾಗ ನೀತಿ, ರಾಜಕೀಯ ಲಾಭಕ್ಕಾಗಿ ತಮಿಳುನಾಡಿಗೆ ಸಹಾಯ ಮಾಡೋದು. ಪ್ರತಿಪಕ್ಷ ಇದ್ದಾಗ ರಾಜ್ಯದ ರೈತರ ಪರವಾಗಿ ವೀರಾವೇಶದಲ್ಲಿ ಮಾತಾಡಿ, ಜನರಿಗೆ ಮೋಸ ಮಾಡೋದು. ರಾಜ್ಯದಲ್ಲಿ ವಿದ್ಯುತ್ ಸಮಸ್ಯೆ ಉಂಟಾಗಿದೆ. ಮಳೆ ಕೊರತೆಯಿಂದ ರಾಜ್ಯದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರೈತರಿಗೆ ವಿದ್ಯುತ್ ಕೂಡ ಸಮರ್ಪಕವಾಗಿ ಕೊಡುತ್ತಿಲ್ಲ. ರಾಜ್ಯದ ಅಭಿವೃದ್ಧಿ ಬಗ್ಗೆ ಇವರಿಗೆ ಕಾಳಜಿ ಇಲ್ಲ. ನಿರಂತರವಾಗಿ ಜನರಿಗೆ ಮೋಸ ಮಾಡಿ ಇವರು ಜನರಿಂದ ಮತ ಹಾಕಿಸಿಕೊಳ್ಳೋದು ಬಿಟ್ರೆ ಬೇರ ಏನಿಲ್ಲ ಎಂದು ಹೇಳಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.