ಬೆಂಗಳೂರು: 7ನೇ ವೇತನ ಆಯೋಗ ವರದಿ ಜಾರಿಗೆ ಮಾಡುವಂತೆ ಪಟ್ಟು ಹಿಡಿದು ಇಂದಿನಿಂದ ಮುಷ್ಕರ ನಡೆಸುತ್ತಿರುವ ನೌಕರರಿಗೆ ರಾಜ್ಯ ಸರ್ಕಾರ ಖಡಕ್ ಎಚ್ಚರಿಕೆ ನೀಡಿದೆ.
ಕೆಲಸಕ್ಕೆ ಗೈರಾಗಿ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಮುಂದಾಗಿರುವ ನೌಕರರ ನಡೆಗೆ ಸುತ್ತೋಲೆಯ ಮೂಲಕ ಸರ್ಕಾರ ಎಚ್ಚರಿಕೆ ನೀಡಿದೆ. ಅನುಮತಿ ಪಡೆಯದೇ ಗೈರಾದರೆ ಯಾವುದೇ ಸರ್ಕಾರದ ಅಧಿಕೃತ ಕೆಲಸ ನಡೆದಿಲ್ಲ ಎಂದು ತೀರ್ಮಾನಿಸಲಾಗುತ್ತದೆ ಮತ್ತು ಶಿಸ್ತುಕ್ರಮದ ತೆಗೆದುಕೊಳ್ಳಲಾಗುತ್ತದೆ ಎಂದು ಸುತ್ತೋಲೆ ಹೊರಡಿಸಲಾಗಿದೆ.
ಸರ್ಕಾರಿ ನೌಕರರು ಕಚೇರಿಗೆ ಅನಿವಾರ್ಯ ಕಾರಣಗಳಿಂದ ಹಾಜರಾಗಲು ಸಾಧ್ಯವಾಗದೇ ಇದ್ದಲ್ಲಿ ಮುಂಚಿತವಾಗಿ ಅಥವಾ ಅಧಿಕೃತವಾಗಿ ರಜೆ ಮಂಜೂರಾತಿಯನ್ನು ಪಡೆಯುವುದು ಕಡ್ಡಾಯವಾಗಿರುತ್ತದೆ. ಇದಕ್ಕೆ ವಿರುದ್ಧವಾಗಿ ಪೂರ್ವಭಾವಿಯಾಗಿ ರಜೆ ಮಂಜೂರಾತಿ ಪಡೆಯದೆ ಕರ್ತವ್ಯಕ್ಕೆ ಗೈರು ಹಾಜರಾದಲ್ಲಿ Dies Non ಎಂದು ಪರಿಗಣಿಸಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಸರ್ಕಾರ ಎಚ್ಚರಿಕೆ ನೀಡಿದೆ.
ವಿವಿಧ ಇಲಾಖೆಯ ಸುಮಾರು 10 ಲಕ್ಷ ರಾಜ್ಯ ಸರ್ಕಾರಿ ನೌಕರರು ಕರ್ತವವ್ಯಕ್ಕೆ ಹಾಜರಾಗದೆ ಮುಷ್ಕರಕ್ಕೆ ಬೆಂಬಲ ಸೂಚಿಸಿದ್ದಾರೆ. ಇದರಿಂದ ಆಸ್ಪತ್ರೆಗಳಲ್ಲಿ ಓಪಿಡಿ ಇಲ್ಲದೆ ರೋಗಿಗಳು ಪರದಾಡುತ್ತಿದ್ದಾರೆ. ಇನ್ನು ವಿದ್ಯಾರ್ಥಿಗಳು ಶಾಲೆ, ಕಾಲೇಜಿಗೆ ಆಗಮಿಸಿ ಶಿಕ್ಷಕರು ಇಲ್ಲದೇ ವಾಪಸ್ ಮನೆ ಹೋಗುತ್ತಿದ್ದಾರೆ. ಮತ್ತೊಂದೆಡೆ ಕೆಲವೆಡೆ ನೌಕರರು ಕೈಗೆ ಕಪ್ಪುಪಟ್ಟಿ ಕಟ್ಟಿಕೊಂಡು ಕರ್ತವ್ಯಕ್ಕೆ ಹಾಜರಾಗಿದ್ದಾರೆ.
ಮುಷ್ಕರಕ್ಕೆ ಸಂಬಂಧಿಸಿ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದು, ನಾವು ಸರ್ಕಾರಿ ನೌಕರರ ಪರವಾಗಿ ಇದ್ದೇವೆ. ಕಾಂಗ್ರೆಸ್ ಖಂಡಿತ ಅಧಿಕಾರಕ್ಕೆ ಬರುತ್ತೆ ಯಾರಿಗೂ ಅನುಮಾನ ಬೇಡ. ನಾವು ಅಧಿಕಾರಕ್ಕೆ ಬಂದ ಕೂಡಲೆ 7ನೇ ವೇತನ ಆಯೋಗದ ಶಿಫಾರಸುಗಳನ್ನು ಜಾರಿ ಮಾಡುತ್ತೇವೆ ಎಂದು ಹೇಳಿದ್ದಾರೆ.