ಬೆಂಗಳೂರು: “ಜನರು, ಕಾರ್ಪೊರೇಟ್ ಸಂಸ್ಥೆಗಳು, ಸಾಮಾಜಿಕ ಕಾರ್ಯಕರ್ತರು ಟಿಬಿ ರೋಗಿಗಳನ್ನು ದತ್ತು ತೆಗೆದುಕೊಳ್ಳಬೇಕು ಮತ್ತು ಟಿಬಿ ಮುಕ್ತ ಭಾರತಕ್ಕೆ ಕೈ ಜೋಡಿಸಬೇಕು ಎಂದು ಕರ್ನಾಟಕ ರಾಜ್ಯಪಾಲ ಥಾವರ್ ಚಂದ್ ಗೆಲ್ಹೋಟ್ ಹೇಳಿದರು.
ಪ್ರಧಾನಮಂತ್ರಿ ಟಿಬಿ ಮುಕ್ತ ಭಾರತ ಅಭಿಯಾನದ ‘ನಿ-ಕ್ಷಯ ಮಿತ್ರ’ದ ಕಾರ್ಯಕ್ರಮದಲ್ಲಿ 100 ಕ್ಷಯ ರೋಗಿಗಳನ್ನು ದತ್ತು ಪಡೆದು ಮಾತನಾಡಿದರು. 2025 ರ ವೇಳೆಗೆ ಭಾರತ ಟಿಬಿ ಮುಕ್ತಗೊಳಿಸಲು ಪ್ರಧಾನಿ ನರೇಂದ್ರ ಮೋದಿ ಗುರಿಯನ್ನು ಹೊಂದಿದ್ದಾರೆ ಎಂದು ತಿಳಿಸಿದರು.
2025 ರ ವೇಳೆಗೆ ಟಿಬಿಯನ್ನು ತೊಡೆದುಹಾಕಲು ರಾಷ್ಟ್ರೀಯ ಕರೆಗೆ ಅನುಗುಣವಾಗಿ, ರಾಜ್ಯವು “ಕ್ಷಯ ಮುಕ್ತ ಕರ್ನಾಟಕ – 2025” ಗಾಗಿ ಈ ಪ್ರಮುಖ ಯೋಜನೆಯನ್ನು ಅಳವಡಿಸಿಕೊಂಡಿದೆ ಎಂದರು. ‘ನಿ-ಕ್ಷಯ 2.0’ ಪೋರ್ಟಲ್ ಮೂಲಕ ಟಿಬಿ ರೋಗಿಗಳಿಗೆ ಸಮುದಾಯದ ಸಹಭಾಗಿತ್ವವನ್ನು ಒದಗಿಸುವ ಉಪಕ್ರಮವು ಶ್ಲಾಘನೀಯವಾಗಿದೆ.
ನಿ-ಕ್ಷಯ ಡಿಜಿಟಲ್ ಪೋರ್ಟಲ್ ಟಿಬಿಯಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ಸಮುದಾಯ ಬೆಂಬಲಕ್ಕಾಗಿ ವೇದಿಕೆಯನ್ನು ಒದಗಿಸುತ್ತಿದೆ, ಈ ಪೋರ್ಟಲ್‌ನಲ್ಲಿ ಸುಮಾರು 13.5 ಲಕ್ಷ ಕ್ಷಯ ರೋಗಿಗಳು ನೋಂದಾಯಿಸಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು.
ಕರ್ನಾಟಕದಲ್ಲಿ ಗುರುತಿಸಲಾದ 39,745 ಟಿಬಿ ರೋಗಿಗಳ ಪೈಕಿ 25,895 ರೋಗಿಗಳು ಪೋಶಣ್ ಆಧಾರ್‌ಗೆ ಒಪ್ಪಿಗೆ ನೀಡಿದ್ದಾರೆ ಮತ್ತು ಅವರಲ್ಲಿ 25,110 ರೋಗಿಗಳನ್ನು ದತ್ತು ಪಡೆಯಲಾಗಿದೆ ಎಂದು ತಿಳಿದುಬಂದಿದೆ.