ಬೆಂಗಳೂರು : ಶಾಸಕ ಮಾಡಾಳ್ ವಿರೂಪಾಕ್ಷಪ್ಪ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಂಡಿದ್ದು ಯಾವುದೇ ಕ್ಷಣದಲ್ಲಿ ಅವರ ಬಂಧನವಾಗುವ ಸಾಧ್ಯತೆಯಿದೆ. ಇಂದು ಹೈಕೋರ್ಟ್ ವಿಚಾರಣೆಯ ವೇಳೆ ಲೋಕಾಯುಕ್ತ ಪರ ವಕೀಲರು ಜಾಮೀನು ಅರ್ಜಿಗೆ ಸಾಕಷ್ಟು ಆಕ್ಷೇಪ ವ್ಯಕ್ತಪಡಿಸಿದ್ದರು.
ವಾದ-ವಿವಾದಗಳನ್ನು ಆಲಿಸಿದ ಏಕಸದಸ್ಯ ಪೀಠ ಅಂತಿಮವಾಗಿ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ. ಮಧ್ಯಂತರ ನಿರೀಕ್ಷಣಾ ಜಾಮೀನು ಆದೇಶದ ಹಿನ್ನೆಲೆ ಮತ್ತೆ ಮಾಡಾಳ್ ವಿರೂಪಾಕ್ಷಪ್ಪಗೆ ಬಂಧನ ಭೀತಿ ಎದುರಾಗಿದೆ. ಲೋಕಾಯುಕ್ತ ಪೊಲೀಸರು ಮಧ್ಯಂತರ ಜಾಮೀನಿಗೆ ಆಕ್ಷೇಪಣೆ ಸಲ್ಲಿಸಿದ್ದರು.
ಕಳೆದ ತಿಂಗಳು ಲೋಕಾಯುಕ್ತರು ಶಾಸಕ ಮಾಡಾಳು ವಿರೂಪಾಕ್ಷಪ್ಪ ವೈಯಕ್ತಿಕ ಕಚೇರಿ ಮೇಲೆ ದಾಳಿ ಮಾಡಿದ್ದಾಗ ಶಾಸಕರ ಪುತ್ರ ಮಾಡಾಳು ಪ್ರಶಾಂತ 40 ಲಕ್ಷ ರೂ. ಹಣ ಪಡೆಯುವ ವೇಳೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದರು. ಇನ್ನು ಕಚೇರಿ ಹಾಗೂ ಮನೆಯ ಮೇಲೆ ದಾಳಿ ನಡೆಸಿದ ವೇಳೆ ಬರೋಬ್ಬರಿ 6 ಕೋಟಿ ರೂ. ಹಣ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದ ಲೋಕಾಯುಕ್ತ ಪೊಲೀಸರು ಒಟ್ಟು 6 ಜನ ಆರೋಪಿಗಳನ್ನಾಗಿ ಚಾರ್ಜ್ ಶೀಟ್ ಸಿದ್ಧಪಡಿಸಿದ್ದರು.
ಪುತ್ರ ಪ್ರಶಾಂತ್ ಮಾಡಾಳ್ ಹಣದೊಂದಿಗೆ ರೆಡ್‌ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಬಳಿಕ ನಾಪತ್ತೆಯಾಗಿದ್ದ ವಿರೂಪಾಕ್ಷಪ್ಪ ಜಾಮೀನು ಸಿಕ್ಕಿದ ಬೆನ್ನಲ್ಲೇ ಮನೆಗೆ ವಾಪಸ್ ಆಗಿದ್ದರು. ಅಭಿಮಾನಿಗಳ, ಬೆಂಬಲಿಗರ ಮೆರವಣಿಗೆ ಭಾರೀ ಟೀಕೆ ವ್ಯಕ್ತವಾಗಿತ್ತು. ಜಾಮೀನು ಅರ್ಜಿ ವಜಾಗೊಂಡಿದ್ದು, ಇದೇ ಕಾರಣಕ್ಕೆ ಮಾಡಾಳ್ ವಿರೂಪಾಕ್ಷಪ್ಪ ಚನ್ನಗಿರಿಯ ತಮ್ಮ ನಿವಾಸದಿಂದ ಅಜ್ಞಾತ ಸ್ಥಳಕ್ಕೆ ಹೊರಟಿದ್ದಾರೆ ಎನ್ನಲಾಗುತ್ತಿದೆ. ವಿರೂಪಾಕ್ಷಪ್ಪ ಮನೆ ಮುಂದೆ ಲೋಕಾಯುಕ್ತ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.