ಬೆಂಗಳೂರು : ಕಾವೇರಿ ಜಲ ವಿವಾದಕ್ಕೆ ಸಂಬಂಧಿಸಿದಂತೆ ತಮಿಳುನಾಡು ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಸೆಪ್ಟೆಂಬರ್ 21ಕ್ಕೆ ಮುಂದೂಡಿಕೆ ಮಾಡಿದೆ.
ಕರ್ನಾಟಕ ಸಾಕಷ್ಟು ಕಾವೇರಿ ನೀರು ಹರಿಸುತ್ತಿಲ್ಲ. ಅವರಿಗೆ ಹೆಚ್ಚುವರಿ ನೀರು ಬಿಡುವಂತೆ ಆದೇಶಿಸಬೇಕು ಎಂದು ಕೋರಿ ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿತ್ತು.
ಇಂದು ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರು, ಒಬ್ಬರು ನ್ಯಾಯಮೂರ್ತಿ ರಜೆಯಲ್ಲಿದ್ದಾರೆ. ನಾನು ಮುಂದಿನ ವಾರ ವಿಚಾರಣೆಗೆ ಲಭ್ಯವಿಲ್ಲ. ಹೀಗಾಗಿ ಸಿಜೆಐ ಪೀಠದ ಮುಂದೆ ಹೋಗಿ ಹೊಸ ಪೀಠಕ್ಕೆ ಮನವಿ ಮಾಡಿ ಎಂದು ತಮಿಳುನಾಡು ಪರ ವಕೀಲ ಮುಕುಲ್ ರೋಹಟಗಿ ಅವರಿಗೆ ಸೂಚಿಸಿದರು.
ಇದನ್ನೂ ಓದಿ : ಪ್ರಧಾನಿಗೆ ಭದ್ರತೆ ನೀಡುವ ಎಸ್ಪಿಜಿ ಪಡೆ ಮುಖ್ಯಸ್ಥ ನಿಧನ
ಈ ವೇಳೆ ನಿಮ್ಮದೇ ಪೀಠದಲ್ಲಿ ವಿಚಾರಣೆ ಮಾಡಿ ಎಂದು ಮುಕುಲ್ ರೋಹಟಗಿ ಮನವಿ ಮಾಡಿದರು. ವಕೀಲರ ಮನವಿಗೆ ಸ್ಪಂದಿಸಿದ ನ್ಯಾಯಮೂರ್ತಿ, ಸೆಪ್ಟೆಂಬರ್ 21ಕ್ಕೆ ವಿಚಾರಣೆ ಮುಂದೂಡಿದ್ದಾರೆ. ಅಂದೇ ಕರ್ನಾಟಕದ ಅರ್ಜಿಯೂ ವಿಚಾರಣೆ ನಡೆಸುವುದಾಗಿ ಹೇಳಿದ್ದಾರೆ.
ಕಾವೇರಿ ಜಲ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮುಂದೆ ಕರ್ನಾಟಕ ಸರ್ಕಾರದ ಅರ್ಜಿ, ತಮಿಳುನಾಡು ಸರ್ಕಾರದ ಅರ್ಜಿ, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಅರ್ಜಿ, ಮಂಡ್ಯದ ರೈತ ಸಂಘದ ಅರ್ಜಿ, ಹೀಗೆ ನಾಲ್ಕು ಅರ್ಜಿಗಳು ಸಲ್ಲಿಕೆಯಾಗಿವೆ. ಸರ್ವೋಚ್ಚ ನ್ಯಾಯಾಲಯ ನಾಲ್ಕು ಆಯಾಮಗಳಲ್ಲಿ ಈ ಅರ್ಜಿಗಳ ವಿಚಾರಣೆಯನ್ನು ಕೂಲಂಕುಷವಾಗಿ ನಡೆಸಲಿದೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.