ಮಂಡ್ಯ : ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ಖಂಡಿಸಿ ಇಂದು ಶ್ರೀರಂಗಪಟ್ಟಣದಲ್ಲಿ ಭೂಮಿತಾಯಿ ಹೋರಾಟ ಸಮಿತಿ ವತಿಯಿಂದ ಮಹಿಳಾ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ವಿನೂತನವಾಗಿ ಒನಕೆ ಹಿಡಿದು ಪ್ರತಿಭಟನೆ ನಡೆಸಿ ರಾಜಕಾರಣಿಗಳ ವಿರುದ್ಧ ಹೋರಾಟಗಾರರು ಕಿಡಿ ಕಾರಿದ್ದಾರೆ. ನಿದ್ದೆ ಮಾಡುತ್ತಿರುವ ರಾಜ್ಯ ಸರ್ಕಾರಕ್ಕೆ ಒನಕೆ ಏಟು, ಸಿದ್ದರಾಮಯ್ಯ, ಡಿಕೆಶಿ ಬಡಿದೇಳಿಸಲು ಒನಕೆ ಏಟು, ಮೌನವಾದ ಶಾಸಕರನ್ನು ಬಡಿದೇಳಿಸಲು ಒನಕೆ ಏಟು ಎಂದು ಘೋಷಣೆಗಳನ್ನು ಕೂಗಿ ಸರ್ಕಾರದ ನಡೆಯನ್ನು ಖಂಡಿಸಿದ್ದಾರೆ.
ಇದನ್ನೂ ಓದಿ : ವಿದ್ಯಾರ್ಥಿಗಳನ್ನು ವಿಶ್ವಮಾನವ ರನ್ನಾಗಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ; ಸಿಎಂ
ದುರಹಂಕಾರಿ ಡಿಕೆಶಿ ಬಡಿದೇಳಿಸಲು ಒನಕೆ ಏಟು ಎಂದು ಉಪಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ವಿರುದ್ಧ ಕೆಂಡಾಮಂಡಲರಾಗಿದ್ದಾರೆ.
ತಮಿಳುನಾಡಿಗೆ ನೀರು ಬಿಟ್ಟುಬಿಟ್ರಲ್ಲಪ್ಪೋ ಎಂದು ಬೊಬ್ಬೆ ಬಡಿದುಕೊಂಡು ಕಾವೇರಿ ನದಿಯ ಸ್ನಾನಘಟ್ಟದಿಂದ ತಾಲೂಕು ಕಚೇರಿಯವರೆಗೆ ಒನಕೆ ಹೊತ್ತು ಮಹಿಳೆಯರ ಪ್ರತಿಭಟನೆ ನಡೆಸಿದ್ದಾರೆ
ಮಹಿಳೆಯರ ಜೊತೆಗೆ ಪುಟ್ಟ ಮಕ್ಕಳೂ ಸಹ ಹೆಜ್ಜೆ ಹಾಕಿದ್ದು ಮೆರವಣಿಗೆಯಲ್ಲಿ ವಿಶೇಷವಾಗಿತ್ತು. ಈ ಮೂಲಕ ಹೋರಾಟಗಾರರು ಮೆರವಣಿಗೆಯುದ್ದಕ್ಕೂ ರಾಜ್ಯ ಸರ್ಕಾರ ಹಾಗೂ ಜನಪ್ರತಿನಿಧಿಗಳ ವಿರುದ್ಧದ ತಮ್ಮ ಆಕ್ರೋಶದ ಕಿಚ್ಚನ್ನು ಹೊರಹಾಕಿದ್ದಾರೆ.


ಗಡಿ ಜಿಲ್ಲೆ ಚಾಮರಾಜನಗರದಲ್ಲಿಯೂ ಕಣ್ಣಿಗೆ ಕಪ್ಪು ಪಟ್ಟಿ ಧರಿಸಿ ಕನ್ನಡಪರ ಸಂಘಟನೆಗಳ ಒಕ್ಕೂಟದಿಂದ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಲಾಯಿತು. ಚಾಮರಾಜೇಶ್ವರ ದೇವಸ್ಥಾನದ ಆವರಣದಿಂದ ಪ್ರತಿಭಟನಾ ಮೆರವಣಿಗೆ ಹೊರಟ ಕಾರ್ಯಕರ್ತರು, ರಾಷ್ಟ್ರೀಯ ಹೆದ್ದಾರಿ 209ರ ಭುವನೇಶ್ವರಿ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ದ ಘೋಷಣೆ ಕೂಗಿದ್ದಾರೆ.


ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಹಿನ್ನೆಲೆ ಮಂಡ್ಯದಲ್ಲಿ 7ನೇ ದಿನಕ್ಕೆ ರೈತರ ಧರಣಿ ಕಾಲಿಟ್ಟಿದೆ. ಅಹೋರಾತ್ರಿಯಿಡೀ ಕೆಆರ್‌ಎಸ್ ಬಳಿ ರೈತಸಂಘದ ವತಿಯಿಂದ ಧರಣಿ ನಡೆಯುತ್ತಿದೆ. ರೈತರ ಧರಣಿಗೆ ಕರ್ನಾಟಕ ರಕ್ಷಣಾ ವೇದಿಕೆಯ ನಾರಾಯಣಗೌಡ ಬಣದಿಂದಲೂ ಬೆಂಬಲ ವ್ಯಕ್ತವಾಗಿದ್ದು, ಇಂದಿನ ಪ್ರತಿಭಟನೆಯಲ್ಲಿ ಕಾರ್ಯಕರ್ತರು ಬಾಗಿಯಾಗಿ ಕೂಡಲೇ ತಮಿಳುನಾಡಿಗೆ ನೀರು ಬಿಡುವುದನ್ನು ನಿಲ್ಲಿಸುವಂತೆ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ರಾಜ್ಯ ಸರ್ಕಾರದ ನಡೆ ಹಾಗೂ ಪ್ರಾಧಿಕಾರದ ಆದೇಶಕ್ಕೆ ಖಂಡನೆ ವ್ಯಕ್ತಪಡಿಸುವ ಘೋಷಣೆಗಳ ಮೂಲಕ ಕಾವೇರಿ ನಮ್ಮದೆಂದು ಪ್ರತಿಪಾದಿಸಿದ್ದಾರೆ. ವಿಶೇಷವೆಂಬಂತೆ ವಿಜ್ಞಾನ ವಿಕಾಸ ವಿಶೇಷ ಮಕ್ಕಳ ಶಾಲೆಯ ವಿದ್ಯಾರ್ಥಿಗಳು ಧರಣಿಯಲ್ಲಿ ಭಾಗಿಯಾಗಿ ಕಾವೇರಿ ನೀರು ಉಳಿವಿಗೆ ಒತ್ತಾಯಿಸದ್ದಾರೆ.


ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.