ಬೆಂಗಳೂರು : ತಮಿಳುನಾಡಿಗೆ ಮುಂದಿನ 15 ದಿನಗಳ ಕಾಲ ಮತ್ತೆ ಕೆಆರ್‌ಎಸ್ ಜಲಾಶಯದಿಂದ ನೀರು ಹರಿಸಲು ಕಾವೇರಿ ನೀರು ನಿಯಂತ್ರಣ ಸಮಿತಿ ಸೂಚಿಸಿರುವ ಹಿನ್ನೆಲೆ ಇಂದು ತುರ್ತಾಗಿ ಸರ್ವಪಕ್ಷಗಳ ಸಭೆಯನ್ನು ಕರೆಯಲಾಗಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವ ಡಿ ಕೆ ಶಿವಕುಮಾರ್ ತಿಳಿಸಿದ್ದಾರೆ.
ಮಂಗಳವಾರ ರಾತ್ರಿ ಸಿಎಂ ಸಿದ್ದರಾಮಯ್ಯ, ಸಚಿವರು, ಅಡ್ವೊಕೇಟ್ ಜನರಲ್ ಹಾಗೂ ಅಧಿಕಾರಿಗಳ ಜೊತೆ ನಡೆದ ಸಭೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾವೇರಿ ವಿಚಾರವಾಗಿ ಚರ್ಚೆ ಮಾಡಲು ಸರ್ವಪಕ್ಷ ಸಭೆ ಕರೆಯಲಾಗಿದೆ. ಹಿರಿಯ ನಾಯಕರು, ಸಂಸದರು, ಸಚಿವರನ್ನು ಸಭೆಗೆ ಆಹ್ವಾನಿಸಲಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ : ʼಮಂಡ್ಯ ರೈತರನ್ನು ಕಾವೇರಿ ವಿಚಾರದಲ್ಲಿ ಮುಳುಗಿಸಿದ್ರಲ್ಲʼ
ಬುಧವಾರ ದೆಹಲಿಗೆ ತೆರಳುತ್ತಿದ್ದು, ಕೇಂದ್ರ ಸಚಿವರನ್ನು ಭೇಟಿ ಮಾಡಿ ರಾಜ್ಯದ ಸಂಕಷ್ಟ ಪರಿಸ್ಥಿತಿ ಬಗ್ಗೆ ಮನವಿ ಸಲ್ಲಿಸುತ್ತೇನೆ ಎಂದು ಮಾಹಿತಿ ನೀಡಿದರು.
ನಮ್ಮಲ್ಲಿ ನೀರಿದ್ದರೆ ತಮಿಳುನಾಡಿಗೆ ಬಿಡಲು ಯಾವುದೇ ಅಭ್ಯಂತರವಿರಲಿಲ್ಲ. ಆದರೆ ನಮಗೆ ನೀರಿನ ತೊಂದರೆ ಎದುರಾಗಿದೆ. ನಮ್ಮಲ್ಲಿ ಮಳೆ ಕೊರತೆ ಹೆಚ್ಚಿದೆ, ನೀರು ಇಲ್ಲವಾಗಿದೆ. ಕುಡಿಯುವ ನೀರು ಶೇಖರಣೆ ನಮ್ಮ ಮೊದಲ ಆದ್ಯತೆಯಾಗಿದೆ. ನಮ್ಮ ಪರಿಸ್ಥಿತಿ ಕುರಿತಾಗಿ ಅಡ್ವೊಕೇಟ್ ಜನರಲ್ ಹಾಗೂ ಅಧಿಕಾರಿಗಳ ಜತೆ ಚರ್ಚೆ ಮಾಡಿದ್ದೇನೆ ಎಂದು ಡಿಕೆಶಿ ಹೇಳಿದರು.
ಸಿಎಂ ತುರ್ತು ಸಭೆಯಲ್ಲಿ ಏನೇನಾಯ್ತು..?
ತಮಿಳುನಾಡಿಗೆ ಕಾವೇರಿ ನದಿ ನೀರು ಬಿಡುವ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ತುರ್ತು ಸಭೆಯನ್ನು ಮಂಗಳವಾರ ಮಧ್ಯಾಹ್ನ ವಿಧಾನಸೌಧದಲ್ಲಿ ಸಭೆ ನಡೆಸಿದರು. ತಮಿಳುನಾಡಿಗೆ ಮುಂದಿನ 15 ದಿನಗಳ ಕಾಲ ಪ್ರತಿದಿನ 5 ಸಾವಿರ ಕ್ಯೂಸೆಕ್ ನೀರು ಬಿಡಲು ಕಾವೇರಿ ನದಿ ನೀರು ಪ್ರಾಧಿಕಾರ ಸೂಚಿಸಿರುವ ಸಂಬಂಧ ಚರ್ಚೆ ನಡೆಯಿತು.
ಸಭೆಯಲ್ಲಿ ಉಪ ಡಿಸಿಎಂ ಡಿ.ಕೆ.ಶಿವಕುಮಾರ್, ಕಾವೇರಿ ಜಲಾನಯನ ಪ್ರದೇಶದ ವ್ಯಾಪ್ತಿಯ ಸಚಿವರುಗಳು, ಎಲ್ಲಾ ಪಕ್ಷಗಳ ಮಾಜಿ ಮುಖ್ಯಮಂತ್ರಿಗಳು, ರಾಜ್ಯ ಸಚಿವ ಸಂಪುಟದ ಹಿರಿಯ ಸಚಿವರು, ಲೋಕಸಭೆ ಮತ್ತು ರಾಜ್ಯ ಸಭಾ ಸದಸ್ಯರು ಸಭೆಯಲ್ಲಿ ಭಾಗಿಯಾಗಿದ್ದರು.
ಪ್ರತಿದಿನ 5,000 ಕ್ಯೂಸೆಕ್ ನೀರು ಬಿಡಲು ಸೂಚಿಸಿದ ಕಾವೇರಿ ನೀರು ನಿಯಂತ್ರಣ ಸಮಿತಿ..
ಕಾವೇರಿ ನೀರಿನ ವಿಚಾರದಲ್ಲಿ ಕರ್ನಾಟಕಕ್ಕೆ ಮತ್ತೆ ಹಿನ್ನಡೆಯಾಗಿದ್ದು, ಮುಂದಿನ 15 ದಿನಗಳ ಕಾಲ ತಮಿಳುನಾಡಿಗೆ ಪ್ರತಿದಿನ 5,000 ಕ್ಯೂಸೆಕ್ ನೀರು ಹರಿಸಲು ಕಾವೇರಿ ನೀರು ನಿಯಂತ್ರಣ ಸಮಿತಿ ಮಂಗಳವಾರ ರಾಜ್ಯ ಸರ್ಕಾರಕ್ಕೆ ಕಳೆದ ಮಂಗಳವಾರ ಸೂಚನೆ ನೀಡಿತ್ತು.
ಸಮಿತಿಯ ಸೂಚನೆ ಹೊರಬೀಳುತ್ತಿದ್ದಂತೆಯೇ ರೈತಸಂಘ ಮಂಡ್ಯದ ಶ್ರೀರಂಗಪಟ್ಟಣದಲ್ಲಿ ಪ್ರತಿಭಟನೆ ನಡೆಸಿ, ಬೆಂಗಳೂರು-ಮೈಸೂರು ಹೆದ್ದಾರಿ ತಡೆ ಮಾಡಿ ಕಾವೇರಿ ನೀರು ನಿಯಂತ್ರಣ ಸಮಿತಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಸಮಿತಿಯು ಮತ್ತೆ ಕರ್ನಾಟಕದ ವಿರುದ್ಧವಾಗಿಯೇ ಸೂಚನೆ ನೀಡಿದೆ ಎಂದು ರೈತ ಸಂಘ ಆಕ್ರೋಶ ವ್ಯಕ್ತಪಡಿಸಿದ್ದು, ಮತ್ತೆ ನೀರು ಬಿಡದಂತೆ ನಿರಂತರ ಧರಣಿ ನಡೆಸಲು ನಿರ್ಧರಿಸಿದೆ. ನೀರು ಬಿಟ್ಟರೆ, ಬೃಹತ್ ಹೋರಾಟ ಮಾಡುವ ಎಚ್ಚರಿಕೆಯನ್ನೂ ಸರ್ಕಾರಕ್ಕೆ ರೈತಸಂಘ ನೀಡಿದೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.