ಬೆಂಗಳೂರು : ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸಿರುವ ರಾಜ್ಯ ಸರ್ಕಾರವು ವಿಪಕ್ಷಗಳ ಆಗ್ರಹಕ್ಕೆ ಮಣಿದು ಇಂದು ಸರ್ವ ಪಕ್ಷಗಳ ಸಭೆಯನ್ನು ನಡೆಸಲಿದೆ.
ಬೆಳಿಗ್ಗೆ 11ಗಂಟೆಗೆ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆಯಲಿರುವ ಸಭೆಯಲ್ಲಿ ರೈತರ ಹಿತ ದೃಷ್ಟಿಯಿಂದ ರಾಜ್ಯದ ನೀರಾವರಿ ಯೋಜನೆಗಳ ಬಗ್ಗೆ ಹಾಗೂ ಪ್ರಮುಖವಾಗಿ ಕಾವೇರಿ ಸಂಕಷ್ಟ ಸೂತ್ರದ ಜೊತೆಗೆ ರಾಜ್ಯದ ಹಿತರಕ್ಷಣೆಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚೆಯಾಗಲಿದೆ.
ಇದನ್ನೂ ಓದಿ : ಕಲುಷಿತ ನೀರು ಸೇವನೆ ಪ್ರಕರಣ ನಡೆದ್ರೆ ಜಿ.ಪಂ ಸಿಇಒ ಸಸ್ಪೆಂಡ್: ಸಿಎಂ ಎಚ್ಚರಿಕೆ
ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶದ ಸಾಧಕ-ಬಾಧಕಗಳ ಬಗ್ಗೆ ಚರ್ಚಿಸಿ ರಾಜ್ಯದ ನಿಲುವಿನ ಬಗ್ಗೆ ಚರ್ಚಿಸಿ ಸರ್ಕಾರವು ನಿರ್ಧಾರ ತೆಗೆದುಕೊಳ್ಳಲಿದೆ.
ತಮಿಳುನಾಡಿಗೆ ಕಾವೇರಿ ಹರಿಯುವಿಕೆಗೆ ಅವಕಾಶ ನೀಡಿದ್ದಕ್ಕೆ ಆಕ್ಷೇಪಿಸಿದ್ದ ವಿಪಕ್ಷಗಳು, ಸರ್ಕಾರ ಮತ್ತು ಸಚಿವರ ನಡೆಗೆ ಅಸಮಾಧಾನ ಹೊರಹಾಕಿದ್ದವು. ಈ ಹಿನ್ನೆಲೆ ಸರ್ವಪಕ್ಷ ಸಭೆ ನಡೆಸಿ ಸಮನ್ವಯತೆ ಸಾಧಿಸಲು ಚಿಂತನೆ ನಡೆಸಿ ಸಿದ್ದರಾಮಯ್ಯ ಸರ್ವಪಕ್ಷ ಸಭೆಗೆ ಮುಂದಾಗಿ, ರಾಜ್ಯದ ವಿಚಾರವಾಗಿ ಒಗ್ಗಟ್ಟಿನ ಸಂದೇಶ ರವಾನಿಸಲು ಸಿದ್ದರಾಗಿದ್ದಾರೆ.
ತಮಿಳುನಾಡಿಗೆ ನೀರು ಹರಿಸಿರುವ ಸರ್ಕಾರದ ಕ್ರಮಕ್ಕೆ ಸಭೆಯಲ್ಲಿ ಆಕ್ಷೇಪಗಳು ವ್ಯಕ್ತವಗುವ ಸಾಧ್ಯತೆಗಳು ದಟ್ಟವಾಗಿವೆ. ಈಗಾಗಲೇ ಮಂಡ್ಯದಲ್ಲಿ ಪ್ರತಿಭಟನೆ ನಡೆಸಿರುವ ಬಿಜೆಪಿ. ಈ ಹಿನ್ನೆಲೆ ಇಂದಿನ ಸಭೆಯಲ್ಲಿ ಕೂಡ ಪರ- ವಿರೋಧದ ಚರ್ಚೆಯ ಲಕ್ಷಣಗಳು ಗೋಚರಿಸುತ್ತಿವೆ.
ಉಪಮುಖ್ಯಮಂತ್ರಿ ಮತ್ತು ನೀರಾವರಿ ಸಚಿವ ಡಿ ಕೆ ಶಿವಕುಮಾರ್, ಕಾನೂನು ಸಚಿವ ಹೆಚ್ ಕೆ ಪಾಟೀಲ್, ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಕುಮಾರಸ್ವಾಮಿ ಸೇರಿದಂತೆ ಮೂರು ಪಕ್ಷದ ಪ್ರಮುಖ ನಾಯಕರು ಸಭೆಯಲ್ಲಿ ಭಾಗಿಯಾಗಲಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.