ಮಂಡ್ಯ: ಕೃಷ್ಣರಾಜ ಸಾಗರ ಡ್ಯಾಂನಲ್ಲಿ (ಕೆಆರ್‌ಎಸ್) ನೀರಿನ ಶೇಖರಣೆ ಕಡಿಮೆ ಇದ್ದರೂ ತಮಿಳುನಾಡಿಗೆ ಪ್ರತಿನಿತ್ಯ ಐದು ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ‘ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ’ ರಾಜ್ಯಕ್ಕೆ ನಿರ್ದೇಶನ ನೀಡಿದ್ದು, ಸುಪ್ರೀಂಕೋರ್ಟ್‌ಗೆ ಪ್ರತ್ಯೇಕ ಅರ್ಜಿ ಸಲ್ಲಿಸಲು ರೈತ ಸಂಘ ನಿರ್ಧರಿಸಿದೆ.
ತಮಿಳುನಾಡಿಗೆ ಹರಿಸುತ್ತಿರುವ ನೀರು ಬಂದ್ ಮಾಡುವಂತೆ ಈಗಾಗಲೇ ನಿರಂತರ ಹೋರಾಟ ನಡೆಸುತ್ತಿರುವ ರೈತ ಮುಖಂಡರು, ಇದೀಗ ನೇರವಾಗಿ ತಾವೇ ಕಾನೂನು ಹೋರಾಟಕ್ಕೆ ಧುಮುಕಲು ಸಜ್ಜಾಗಿದ್ದಾರೆ. ತಮಿಳುನಾಡು ಕೂಡ ತನ್ನ ಪಾಲಿನ ನೀರಿಗಾಗಿ ಸುಪ್ರೀಂ ಕದ ತಟ್ಟಿದ್ದು, ಮುಖ್ಯ ನ್ಯಾಮೂರ್ತಿಗಳು ಪ್ರತ್ಯೇಕ ಪೀಠ ರಚಿಸಿದ್ದಾರೆ.
ಈ ಕುರಿತು ಶಾಸಕ ದರ್ಶನ್ ಪುಟ್ಟಣ್ಣಯ್ಯ (Darshan Punnaiah) ಮಾತನಾಡಿ, ‘ಸುಪ್ರೀಂಕೋರ್ಟಿನಲ್ಲಿ ಸರ್ಕಾರ ಸಲ್ಲಿಸಿರುವ ಅರ್ಜಿ ಬಗ್ಗೆ ಮಾಹಿತಿ ತೆಗೆದುಕೊಳ್ಳುತ್ತೇವೆ. ಮಾಜಿ ಅಡ್ವೊಕೇಟ್ ಜನರಲ್ ರವಿವರ್ಮ ಕುಮಾರ್ ಅವರಿಂದ ನಾವು ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸುತ್ತೇವೆ. ಬುಧವಾರ ವಿಚಾರಣೆಗೆ ಬರುವ ಹಾಗೆ ನಾವು ಇಂದು ಬೆಂಗಳೂರಿನಲ್ಲಿ ಅರ್ಜಿ ಸಲ್ಲಿಸುತ್ತೇವೆ’ ಎಂದು ಹೇಳಿದರು.
ಇದನ್ನೂ ಓದಿ; ಇಂದು ಬರಪೀಡಿತ ತಾಲ್ಲೂಕುಗಳ ಮೊದಲ ಪಟ್ಟಿ ಘೋಷಣೆ : ಕೃಷ್ಣ ಬೈರೇಗೌಡ
‘ಪ್ರಸ್ತುತ ಕಾವೇರಿ ಕೊಳ್ಳದಲ್ಲಿನ ಸ್ಥಿತಿಗತಿಗಳ ಬಗ್ಗೆ ನಾವು ನಮ್ಮ ಅರ್ಜಿಯಲ್ಲಿ ಉಲ್ಲೇಖಿಸುತ್ತೇವೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ (CWMA) ಅಧಿಕಾರಿಗಳು ಸ್ಥಳಕ್ಕೆ ಬಂದು ವಸ್ತುಸ್ಥಿತಿ ತಿಳಿಯಬೇಕು. ಬಾಕಿ ಇರುವ ನೀರಿನ ಲೆಕ್ಕಾಚಾರವನ್ನು ಅವರೇ ಹಾಕಬೇಕು. ಮುಂದೆ ಮಳೆ ಬೀಳದಿದ್ದರೆ, ಉಳಿದಿರುವ 12 ಟಿಎಂಸಿ ನೀರು ಯಾವುದಕ್ಕೆ ಸಾಕಾಗುತ್ತದೆ ಎನ್ನುವುದರ ಬಗ್ಗೆ ಅವರೇ ತಿಳಿಯಲಿ’ ಎಂದು ಹೇಳಿದರು.
‘ಬೆಂಗಳೂರಿಗೆ ಕುಡಿಯುವ ನೀರಿಗಾಗಿ 30 ಟಿಎಂಸಿ ಬೇಕು; ಈಗಾಗಲೇ ಬೆಂಗಳೂರಲ್ಲಿ ಮೂರು ನಾಲ್ಕು ದಿನಗಳಿಗೆ ನೀರು ಕೊಡ್ತಾ ಇದ್ದಾರೆ. ಹೀಗೆ ಆದರೆ ಮುಂದಿನ ದಿನಗಳಲ್ಲಿ ಕುಡಿಯೋ ನೀರು ಕೋಡೋಕು ಆಗಲ್ಲ. ನೀರಾವರಿ ಸಮಿತಿ (ಐಸಿಸಿ) ಸಭೆಯಲ್ಲಿ ನಾಟಿ ಮಾಡಿ ಎಂದು ಹೇಳಿದ್ರು; ಅವರ ಮಾತು ಕೇಳಿಕೊಂಡು ಎಲ್ಲರೂ ನಾಟಿ ಮಾಡಿದ್ದಾರೆ. ಬೆಳೆ ಪರಿಹಾರಕ್ಕೆ ಪ್ರತ್ಯೇಕ ಪ್ಯಾಕೇಜ್ ಮಾಡಿ ಪರಿಹಾರ ನೀಡಬೇಕು’ ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.