ಬೆಂಗಳೂರು : ಕೆಂಪೇಗೌಡರ ಕಂಚಿನ ಪ್ರತಿಮೆಯನ್ನು ಸಂಸತ್ತಿನ ಮುಂದೆ ಸ್ಥಾಪಿಸುವಂತೆ ಮಾಜಿ ಪ್ರಧಾನ ಮಂತ್ರಿ ಎಚ್.ಡಿ ದೇವೇಗೌಡರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.ʼ
ʼಕೆಂಪೇಗೌಡರು 16ನೇ ಶತಮಾನದಲ್ಲಿ ಬೆಂಗಳೂರು ನಗರವನ್ನು ಸ್ಥಾಪಿಸಿದರು. ಇಂದು ಬೆಂಗಳೂರು ಜಾಗತಿಕ ಮೆಟ್ರೊಪೊಲಿಟನ್ ನಗರವಾಗಿ ಬೆಳೆದು ದೇಶಕ್ಕೆ ಕೀರ್ತಿ ತಂದಿದೆ ಎಂಬುದು ನಮ್ಮ ಹೆಮ್ಮೆಯಾಗಿದೆ.
ದೇಶ ಸಾಧಿಸಿರುವ ತಂತ್ರಜ್ಞಾನದ ಮುನ್ನಡೆಗೆ ಕೆಂಪೇಗೌಡರನ್ನು ಪ್ರೇರಣೆಯಾಗಿ ಭಾವಿಸಬಹುದಾಗಿದೆ. ವೈಜ್ಞಾನಿಕ ಹಾಗೂ ತಂತ್ರಜ್ಞಾನದ ಶ್ರೇಷ್ಠತೆಯುಳ್ಳ ಗಣನೀಯ ಸಂಖ್ಯೆಯ ಸಂಸ್ಥೆಗಳನ್ನು ಹೊಂದಿರುವ ಇಂಥ ಇನ್ನೊಂದು ನಗರ ದೇಶದಲ್ಲಿ ಇಲ್ಲʼʼ ಎಂದು ದೇವೇಗೌಡರು ಪತ್ರದಲ್ಲಿ ಪ್ರಸ್ತಾಪಿಸಿದ್ದಾರೆ.
ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿರುವ ಗೌಡರು, ಕೆಂಪೇಗೌಡ ಕೇಂದ್ರ ಸಮಿತಿ ಕೂಡ ಇದೇ ಬೇಡಿಕೆಯನ್ನು ಮುಂದಿಟ್ಟಿದೆ. ಸಮಿತಿಯ ಮನವಿಯನ್ನು ನನ್ನ ವೈಯಕ್ತಿಕ ಶಿಫಾರಸ್ಸಿನೊಂದಿಗೆ ಪ್ರಧಾನಿಗೆ ರವಾನಿಸಿದ್ದೇನೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ