ಬೆಂಗಳೂರು: ಕೆಂಪೇಗೌಡರ ಹೆಸರಿನಲ್ಲಿ ಯೂನಿವರ್ಸಿಟಿ ಮಾಡಿ, ಯುವಕರಿಗೆ ಶಿಕ್ಷಣ ಹಾಗೂ ಉದ್ಯೋಗ ಕೊಡುವುದಾಗಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಭರವಸೆ ನೀಡಿದರು.ಬೆಂಗಳೂರಿನ ಬಸವನಗುಡಿಯ ಗವಿಗಂಗಾಧರೇಶ್ವರ ದೇವಾಲಯದಲ್ಲಿ ಪೂಜೆ, ಪ್ರಾರ್ಥನೆ ಸಲ್ಲಿಸಿದ ಬಳಿಕ ಪಂಚರತ್ನ ರಥಯಾತ್ರೆಗೆ ಮಾಜಿ ಮುಖ್ಯಮಂತ್ರಿ ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿ ಚಾಲನೆ ನೀಡಿದರು.
ಇದೇ ವೇಳೆ ಜೆಡಿಎಸ್ ನಿಂದ ಕೆಂಪೇಗೌಡ ವಿಶ್ವವಿದ್ಯಾಲಯ ಸ್ಥಾಪಿಸಲಾಗುವುದು. ಕೆಂಪೇಗೌಡರ ಕನಸು ನನಸು ಮಾಡುತ್ತೇನೆ, ಪಂಚರತ್ನ ರಥಯಾತ್ರೆ ನವೆಂಬರ್ 1ರಂದು ಮುಳಬಾಗಿಲಿನ ಕುರುಡುಮಲೆಯ ಮಹಾಗಣಪತಿ ದೇವಾಲಯದಿಂದ ಈ ರಥಯಾತ್ರೆ ಪೂರ್ಣಪ್ರಮಾಣದಲ್ಲಿ ಹೊರಡಲಿದ್ದು, ನವೆಂಬರ್ 1 ರಿಂದ ಜೆಡಿಎಸ್ ಪಂಚರತ್ನ ರಥಯಾತ್ರೆ ನಡೆಸಲು ಯೋಜಿಸಲಾಗಿತ್ತು. ಆದರೆ, ಇಂದು ಉತ್ತಮ ದಿನವಾಗಿದ್ದರಿಂದ ಪಂಚರತ್ನ ರಥಯಾತ್ರೆಗೆ ಚಾಲನೆ ನೀಡಲಾಯಿತು.
ನಾಳೆ ಅಣ್ಣಮ್ಮ ದೇವಾಲಯದಲ್ಲಿ ಪೂಜೆ ಸಲ್ಲಿಸಲಾಗುವುದು. ತದನಂತರ ನವೆಂಬರ್ 1ರಂದು ಕೋಲಾರದಲ್ಲಿ ಸಮಾವೇಶ ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು. ಇದೇ ವೇಳೆ ಕಾಂಗ್ರೆಸ್ ಹಾಗೂ ಬಿಜೆಪಿಯ ವಿರುದ್ಧ ಕುಮಾರಸ್ವಾಮಿ ಮಾತನಾಡಿ, ಕಾಂಗ್ರೆಸ್ ನವರು ಭಾರತ್ ಜೋಡೋ ಆದ್ರೂ ಮಾಡಲಿ, ಬಿಜೆಪಿಯವರು ಸಂಕಲ್ಪ ಯಾತ್ರೆ ಬೇಕಿದ್ರೂ ಮಾಡಿಕೊಳ್ಳಲಿ, ಆದರೆ, 2023ಕ್ಕೆ ಜೆಡಿಎಸ್ ಅಧಿಕಾರಕ್ಕೆ ಬರೋದು ನಿಶ್ಚಿತ ಎಂದರು.
ಜನರಿಂದ ಲೂಟಿ ಮಾಡಿರುವ ಹಣವನ್ನು ಜನರಿಗೇ ಹಂಚುತ್ತಾರೆ. ಆದರೆ, ನಾವು ಲೂಟಿ ಮಾಡಿಲ್ಲ. ಕಾಂಗ್ರೆಸ್-ಬಿಜೆಪಿಯಿಂದ ಜನರ ಸಮಸ್ಯೆ ನಿವಾರಣೆ ಮಾಡಲು ಆಗುವುದಿಲ್ಲ ಎಂದರು.