ತಿರುವನಂತಪುರ: ಉತ್ತರಪ್ರದೇಶದ ಮುಜಾಫರ್‌ನಗರದಲ್ಲಿ ಹೋಮ್ ವರ್ಕ್ ಮಾಡದ ಕಾರಣಕ್ಕೆ ಮಹಿಳಾ ಶಿಕ್ಷಕಿಯೊಬ್ಬರು ಮುಸ್ಲಿಂ ವಿದ್ಯಾರ್ಥಿಗೆ ಹಿಂದೂ ವಿದ್ಯಾರ್ಥಿಯಿಂದ ಕಪಾಳಮೋಕ್ಷ ಮಾಡಿಸಿರುವ ವಿಚಾರ ಎಲ್ಲೆಡೆ ಸದ್ದು ಮಾಡುತ್ತಿದೆ.
ಇದೀಗ ಕಪಾಳಮೋಕ್ಷಕ್ಕೆ ಗುರಿಯಾದ ಮುಸ್ಲಿಂ ವಿದ್ಯಾರ್ಥಿಯನ್ನು ನಾವು ದತ್ತು ಪಡೆದು, ಉಚಿತ ಶಿಕ್ಷಣ ನೀಡಲು ಸಿದ್ಧರಿದ್ದೇವೆ ಎಂದು ಕೇರಳ ಸರ್ಕಾರ ಘೋಷಿಸಿದೆ.
ಈ ಬಗ್ಗೆ ಮಾತನಾಡಿರುವ ಕೇರಳ ಶಿಕ್ಷಣ ಸಚಿವ ವಿ.ಶಿವನ್ ಕುಟ್ಟಿ, ಪೋಷಕರು ಒಪ್ಪಿದರೆ ಆ ವಿದ್ಯಾರ್ಥಿಯನ್ನು ದತ್ತು ಪಡೆದು ಶಿಕ್ಷಣ ನೀಡುತ್ತೇವೆ. ಎಡಪಂಥೀಯ ಹಾಗೂ ಕೇರಳದ ಜನರು ಜಾತ್ಯಾತೀತ ಮೌಲ್ಯಗಳನ್ನು ರಕ್ಷಿಸುವ ಉದ್ದೇಶ ಹೊಂದಿದ್ದಾರೆ. ಈಗಾಗಲೇ ಹಿಂಸಾಚಾರಪೀಡಿತ ಮಣಿಪುರ ರಾಜ್ಯದ ಮಗುವಿಗೆ ಕೇರಳದಲ್ಲಿ ಶಿಕ್ಷಣ ನೀಡಲಾಗುತ್ತಿದೆ ಎಂದಿದ್ದಾರೆ.
ಇದನ್ನೂ ಓದಿ: ಮುಸ್ಲಿಂ ವಿದ್ಯಾರ್ಥಿಗೆ ಕಪಾಳಮೋಕ್ಷ; ಶಾಲೆ ದ್ವೇಷದ ಮಾರುಕಟ್ಟೆ ಆಗ್ತಿದೆ ಎಂದ ರಾಹುಲ್
ಏನಿದು ಪ್ರಕರಣ?: ಮುಜಾಫರ್‌ನಗರದ ಖುಬ್ಬಾಪುರ ಗ್ರಾಮದ ನೇಹಾ ಪಬ್ಲಿಕ್ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ಶಿಕ್ಷಕಿ ತೃಪ್ತಿ ತ್ಯಾಗಿ ಎಂಬುವರು ಮುಸ್ಲಿಂ ಹುಡುಗನಿಗೆ ಕಪಾಳಮೋಕ್ಷ ಮಾಡಿಸಿದ್ದರು. ಅಲ್ಲದೆ ಕೋಮುಪ್ರೇರಿತ ಹೇಳಿಕೆಗಳನ್ನು ಅವರು ನೀಡಿದ್ದರು. ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿ, ವಿರೋಧಕ್ಕೂ ಕಾರಣವಾಗಿತ್ತು. ಅಲ್ಲದೆ, ಶಿಕ್ಷಕಿಯ ವಿರುದ್ಧ ಕೇಸ್ ಕೂಡ ದಾಖಲಾಗಿದೆ.
ಈ ಬಗ್ಗೆ ಸಮರ್ಥಿಸಿಕೊಂಡಿರುವ ಶಿಕ್ಷಕಿ, ನಾನು ಅಂಗವಿಕಲೆ ಆದ ಕಾರಣಕ್ಕೆ ಬೇರೆ ವಿದ್ಯಾರ್ಥಿಗಳಿಂದ ಈ ರೀತಿ ಮಾಡಿಸಿದೆ. ಆದರೆ, ರಾಜ್ಯದಲ್ಲಿ ಉದ್ವಿಗ್ನತೆ ಸೃಷ್ಟಿಸುವ ಕಾರಣಕ್ಕೆ ವಿಡಿಯೋ ತಿರುಚಲಾಗಿದೆ ಎಂದು ದೂರಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.