ಮದ್ದೂರು: ಜೆಡಿಎಸ್‌ನ ಪಂಚರತ್ನ ರಥಯಾತ್ರೆ ಹತ್ತಿಕ್ಕಲು ‘ಕೇಶವಕೃಪಾ’ದಲ್ಲಿ ಚರ್ಚೆ ನಡೆಯುತ್ತಿದೆ. ಕೊರೋನಾ ಭೂತ ಬಿಟ್ಟು ಪಂಚರತ್ನ ಯಾತ್ರೆ ಹತ್ತಿಕ್ಕಲು ಸರ್ಕಾರ ಮುಂದಾದರೆ ಅದು ಸಾಧ್ಯವಿಲ್ಲ. ಜನ ತಕ್ಕ ಉತ್ತರ ನೀಡುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಸುದ್ದಿಗಾರರ ಜತೆಗೆ ಮಾತನಾಡಿ, ಜೆಡಿಎಸ್‌ನ ಪಂಚರತ್ನ ರಥಯಾತ್ರೆಗೆ ವ್ಯಕ್ತವಾಗುತ್ತಿರುವ ಭಾರೀ ಜನಬೆಂಬಲ ಕಂಡು ಕೇಶವಕೃಪಾದಲ್ಲಿ ಅದನ್ನು ಹತ್ತಿಕ್ಕಲು ಚರ್ಚೆ ನಡೆಯುತ್ತಿದೆ ಎಂಬ ಮಾಹಿತಿ ಇದೆ. ಪ್ರಧಾನಿಗಳ ಗಮನಕ್ಕೆ ತಂದು ಯಾತ್ರೆಗೆ ನಿರ್ಬಂಧ ಹೇರಲು ಹುನ್ನಾರ ನಡೆಯುತ್ತಿದೆ ಎಂಬ ಮಾಹಿತಿ ನನಗಿದೆ ಎಂದರು.
ಇದೇ ವೇಳೆ ಕೊರೋನಾ ವಿಚಾರವಾಗಿ ಲಘುವಾಗಿ ಮಾತನಾಡುವುದಿಲ್ಲ ಎಂದ ಅವರು, ಯಾವುದೇ ಸಾಂಕ್ರಾಮಿಕ ರೋಗ ಬಂದಾಗಲೂ ಸರ್ಕಾರ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದರು.ಕೊರೋನಾ ಭೂತ ಬಿಟ್ಟು ಪಂಚರತ್ನ ರಥಯಾತ್ರೆ ಹತ್ತಿಕ್ಕಲು ಮುಂದಾದರೆ ಅದು ಸಾಧ್ಯವಿಲ್ಲ. ಚೀನಾದಲ್ಲಿ ಕೋವಿಡ್ ಆರ್ಭಟಿಸುತ್ತಿರುವುದು ಗೊತ್ತಿದೆ. ನಮ್ಮಲ್ಲೂ ಎರಡ್ಮೂರು ಕಡೆ ಕೊರೋನಾ ಆರಂಭವಾಗಿದೆ ಎನ್ನುತ್ತಿದ್ದಾರೆ.
ಸರ್ಕಾರ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಅದನ್ನೇ ಅಸ್ತ್ರವನ್ನಾಗಿಸಿಕೊಂಡು ರಥಯಾತ್ರೆ ಹತ್ತಿಕ್ಕುವುದಕ್ಕೆ ಬಳಸಿದರೆ ಜನ ತಕ್ಕ ಉತ್ತರ ನೀಡುತ್ತಾರೆ ಎಂದು ಎಚ್ಚರಿಸಿದರು.