ಬೆಂಗಳೂರು: ಕೆಪಿಸಿಸಿ ಎಂದರೆ ಕರ್ನಾಟಕ ಪ್ರದೇಶ ಸಿಡಿ ಕಮಿಟಿ ಎಂದು ಎಂಎಲ್ ಸಿ ಲಖನ್ ಜಾರಕಿಹೊಳಿ ವ್ಯಂಗ್ಯವಾಡಿದರು.
ಮಾಧ್ಯಮದವರೊಂದಿಗೆ ಮಾತನಾಡಿ, ರಮೇಶ್ ಜಾರಕಿಹೊಳಿ ಏನೂ ತಪ್ಪು ಮಾಡಿಲ್ಲ, ಸಿಡಿ ಪ್ರಕರಣ ಹಿಂದೆ ಷಡ್ಯಂತ್ರವಿದೆ ಎಂದರು. ಕ್ಷುಲ್ಲಕ ರಾಜಕಾರಣಕ್ಕಾಗಿ ಸಿಡಿ ಬಿಟ್ಟು ಕೀಳುಮಟ್ಟದ ರಾಜಕೀಯ ಮಾಡುತ್ತಿದ್ದಾರೆ. ಕಾಂಗ್ರೆಸ್ ನ್ನು ಜನ ತಿರಸ್ಕರಿಸಿದ್ದಾರೆ.
ಮಲ್ಲಿಕಾರ್ಜುನ ಖರ್ಗೆಯವರು, ಪರಮೇಶ್ವರ್ ಅವರು, ಸಿದ್ದರಾಮಯ್ಯ ನವರು ಕೆಪಿಸಿಸಿಯಲ್ಲಿದ್ದಾಗ ಪರಿಸ್ಥಿತಿ ಬೇರೆ ಇತ್ತು, ಈಗ ಡಿ ಕೆ ಶಿವಕುಮಾರ್ ಕೈಗೆ ಸಿಕ್ಕಿದ ಮೇಲೆ ಅಧೋಗತಿಗೆ ಇಳಿಯುತ್ತಿದೆ. ಇವರ ಕೈಗೆ ಅಧಿಕಾರ ಸಿಕ್ಕರೆ ಅಷ್ಟೆ ಕಥೆ ಮುಗಿಯಿತು ಎಂದು ಅಭಿಪ್ರಾಯಪಟ್ಟರು.
ಸಿದ್ದರಾಮಯ್ಯನವರು ಒಳ್ಳೆ ಆಡಳಿತ ಕೊಟ್ಟರು, ಈಗ ಬೊಮ್ಮಾಯಿಯವರು ಉತ್ತಮ ಆಡಳಿತ ನೀಡುತ್ತಿದ್ದಾರೆ. ಡಿಕೆಶಿ ಎಲ್ಲಿ ಪ್ಯಾಂಟ್ ಲುಂಗಿ ಬಿಚ್ಚುತ್ತಾರೆ ಅನ್ನೋದು ನಮಗೆ ಗೊತ್ತಿದೆ, ಡಿಕೆಶಿ ಕೆಪಿಸಿಸಿ ಅಧ್ಯಕ್ಷಅಲ್ಲ, ಕರ್ನಾಟಕ ಪ್ರದೇಶ ಸಿಡಿ ಕಮಿಟಿ ಅಧ್ಯಕ್ಷ ಎಂದು ವ್ಯಂಗವಾಡಿದರು.
ಮುಂದಿನ ದಿನಗಳಲ್ಲಿ ರಮೇಶ ಜಾರಕಿಹೊಳಿಗೆ ಒಳ್ಳೆಯ ದಿನಗಳು ಬರಲಿವೆ, ನಮಗೆ ನ್ಯಾಯ ಬೇಕಿದೆ, ಅದಕ್ಕಾಗಿ ನಾವು ಸಿಬಿಐ ತನಿಖೆಗೆ ಆಗ್ರಹಿಸ್ತಾ ಇದ್ದೇವೆ ಎಂದರು. ಸಿಡಿ ಫ್ಯಾಕ್ಟರಿ ಹೆಡ್ ಕ್ವಾರ್ಟರ್ಸ್ ಬೆಳಗಾವಿ, ಕನಕಪುರ, ಬೆಂಗಳೂರು ಎಲ್ಲ ಕಡೆಯೂ ಇದೆ, ನಮಗೆ ಜನರ , ಕುಟುಂಬದ ಎಲ್ಲರ ಬೆಂಬಲ ಇದೆ, ಇಂತಹ ನೂರು ಸಿಡಿಗಳು ಬಂದರೂ ನಾವು ಹೆದರಲ್ಲ ಎಂದರು.