ತುಮಕೂರು: ಬಹುಮತ ಪಡೆದ ಕಾಂಗ್ರೆಸ್ ಪಾಳೆಯದಲ್ಲಿ ಸಿಎಂ ಕುರ್ಚಿ ವಿಚಾರ ಕಗ್ಗಂಟಾಗೇ ಉಳಿದಿದ್ದು, ಸಿದ್ದರಾಮಯ್ಯ-ಡಿ.ಕೆ.ಶಿವಕುಮಾರ್ ಸಿಎಂ ಸ್ಥಾನಕ್ಕಾಗಿ ಭಾರೀ ಲಾಬಿ ನಡೆಯುತ್ತಿದೆ. ಈ ವಿಚಾರವಾಗಿ ಬಹಿರಂಗವಾಗೇ ಸಿಎಂ ಕುರ್ಚಿ ಬಗ್ಗೆ ಇಂಗಿತ ವ್ಯಕ್ತಪಡಿಸಿರುವ ಡಿಕೆ ಶಿವಕುಮಾರ್, ನಾನು ಪಕ್ಷದ ವಿಚಾರದಲ್ಲಿ ಹಲವು ಬಾರಿ ಸೋತು ಸಿದ್ದರಾಮಯ್ಯ ಅವರಿಗೆ ಸಹಕಾರ ಕೊಟ್ಟಿದ್ದೇನೆ. ಈಗ ಅವರು ನನಗೆ ಸಹಕಾರ ಕೊಡುತ್ತಾರೆ ಎಂಬ ವಿಶ್ವಾಸವಿದೆ ಎಂದಿದ್ದಾರೆ. ಈ ಮೂಲಕ ಸಿಎಂ ಆಸೆಯನ್ನು ಡಿಕೆ ಶಿವಕುಮಾರ್ ಮತ್ತೊಮ್ಮೆ ಪರೋಕ್ಷವಾಗಿ ವ್ಯಕ್ತಪಡಿಸಿದ್ದು, ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಸ್ಥಾನದ ಆಯ್ಕೆ ಕಗ್ಗಂಟಾಗುವ ಸಾಧ್ಯತೆ ಇದೆ.
ತಿಪಟೂರು ತಾಲೂಕಿನ ನೊಣವಿನಕೆರೆ ಕಾಡಸಿದ್ದೇಶ್ವರ ಮಠದಲ್ಲಿ ಅಜ್ಜಯ್ಯನ ದರ್ಶನ ಪಡೆದ ಬಳಿಕ ಮಾತನಾಡಿದ ಅವರು, ಕೆಲವರು ನನಗೆ ಸಿದ್ದರಾಮಯ್ಯರ ನಡುವೆ ವ್ಯತ್ಯಾಸ ಇದೆ ಎಂದು ಹೇಳುತ್ತಾರೆ. ಆದರೆ, ನಮ್ಮಿಬ್ಬಿರ ನಡುವೆ ಯಾವುದೇ ವ್ಯತ್ಯಾಸ ಇಲ್ಲ. ಹಲವು ಬಾರಿ ಪಕ್ಷದ ವಿಚಾರದಲ್ಲಿ ನಾನು ಸೋತಿದ್ದೇನೆ. ಆರಂಭದಲ್ಲಿ ನನ್ನನ್ನು ಸಚಿವನನ್ನಾಗಿ ಮಾಡದೇ ಇದ್ದಾಗ ನಾನು ತಾಳ್ಮೆಯಿಂದ ಇದ್ದೆ. ಸಿದ್ದರಾಮಯ್ಯ ಅವರಿಗೆ ಸಹಕಾರ ಕೊಟ್ಟಿದ್ದೇನೆ. ಈ ಸಲ ಅವರು ನನಗೆ ಸಹಕಾರ ಕೊಡುವ ವಿಶ್ವಾಸವಿದೆ. ನಾನು ಕಾಂಗ್ರೆಸ್ ಪಕ್ಷಕ್ಕೆ ಜವಾಬ್ದಾರಿಯುತವಾಗಿ ನಡೆದುಕೊಂಡಿದ್ದೇನೆ. ದಿನೇಶ್ ಗುಂಡೂರಾವ್ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದಾಗ ಸೋನಿಯಾ ಗಾಂಧಿ ಅವರು ನನ್ನ ಹೆಗಲಿಗೆ ಪಕ್ಷದ ಜವಾಬ್ದಾರಿ ಹೊರಿಸಿದ್ರು. ನಾನು ಜೈಲಿಂದ ಹೊರಬರುತ್ತಲೇ ಅಧಿಕಾರ ಹಿಡಿದೆ. ಹಗಲು ರಾತ್ರಿ ಪಕ್ಷಕ್ಕಾಗಿ ದುಡಿದಿದ್ದೇನೆ ಎಂದು ನೆನಪಿಸಿಕೊಂಡ ಅವರು, ಮುಖ್ಯಮಂತ್ರಿ ಸ್ಥಾನ ಸಿಎಲ್‌ಪಿ ಸಭೆಯಲ್ಲಿ ನಿರ್ಧಾರ ಆಗುತ್ತದೆ ಎಂದು ತಿಳಿಸಿದರು. ನನಗೆ ಮಾನಸಿಕವಾಗಿ ಅಜ್ಜಯ ಧೈರ್ಯ ಕೊಟ್ಟಿದ್ದಾರೆ. ನಾನು 134 ಸೀಟು ಕೇಳಿದ್ದೆ, ಯಾರ ಹಂಗಿನಲ್ಲೂ ನಾವು ಅಧಿಕಾರ ಮಾಡ್ಬಾರ್ದು ಎಂದು ಅಜ್ಜಯ್ಯನ ಬಳಿ ಬೇಡಿಕೊಂಡಿದ್ದೆ. ಕಾಡಸಿದ್ದೇಶ್ವರ ಮಠ ನಮಗೆ ಪುಣ್ಯ ಕ್ಷೇತ್ರ. ಪ್ರತಿ ಸಂದರ್ಭದಲ್ಲೂ ಶ್ರೀಗಳು ನಮಗೆ ಮಾರ್ಗದರ್ಶನ ನೀಡಿದ್ದಾರೆ. ಟಿಕೆಟ್ ಹಂಚಿಕೆ ಸೇರಿ ಎಲ್ಲ ತೀರ್ಮಾನವನ್ನು ಇಲ್ಲೇ ಮಾಡಿದ್ದೆ. ರಾಜ್ಯಕ್ಕೆ ಒಳ್ಳೆಯದಾಗಲಿ ಅಂತ ಮಾರ್ಗದರ್ಶನ ಕೊಟ್ಟಿದ್ದಾರೆ ಎಂದರು. ಆದಾಯ ತೆರಿಗೆ, ಐಟಿ ದಾಳಿ ಆದಾಗಲೂ ನಾನು ಅಜ್ಜಯ್ಯನ ಮಾರ್ಗದರ್ಶನ ಪಡೆದಿದ್ದೆ. ಹೆಲಿಕಾಪ್ಟರ್ ದುರಂತ ಆದ ಬಳಿಕ ನನ್ನ ಮಗಳು ಕೂಡ ಇಲ್ಲಿಗೆ ಬಂದು ಹೋದಳು. ನಾನು ಅಧಿಕಾರ ಹಿಡಿದಾಗಲೇ, ಹೆಣ್ಣು ಮಕ್ಕಳ ಬಗ್ಗೆ ಹೆಚ್ಚು ಚಿಂತನೆ ಮಾಡ್ಬೇಕು ಎನ್ನುವ ಮಾರ್ಗದರ್ಶನ ಅಜ್ಜಯ್ಯನ ಕಡೆಯಿಂದ ಬಂದಿತ್ತು. ಹೀಗಾಗಿಯೇ ನಾವು ಗೃಹಲಕ್ಷ್ಮೀ, ಹೆಣ್ಣು ಮಕ್ಕಳಿಗೆ ಉಚಿತ ಬಸ್ ಪಾಸ್ ಕೊಡುವ ಯೋಜನೆ ಮಾಡಿದೇವು ಎಂದರು.