ಹುಬ್ಬಳ್ಳಿ: ಒಕ್ಕಲಿಗರಾರೂ ಭಿಕ್ಷುಕರಲ್ಲ. ಅವರು ಒಕ್ಕಲುತನ ಮಾಡಿಕೊಂಡು, ಅನ್ನದಾತರಾಗಿದ್ದಾರೆ. ಒಕ್ಕಲುತನ ಮಾಡುವವರು ಶ್ರಮಪಟ್ಟು ಸಮಾಜಕ್ಕೆ ತನ್ನದೇ ಆದ ಕೊಡುಗೆ ನೀಡಿದ್ದಾರೆ. ಶೇ.3ರಷ್ಟು ಮೀಸಲಿಗೆ ಯಾರೂ ಭಿಕ್ಷೆ ಬೇಡುತ್ತಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಶೇ.3ರಷ್ಟು ಮೀಸಲಾತಿ ಪಡೆಯಲು ಒಕ್ಕಲಿಗರೇನು ಭಿಕ್ಷುಕರಲ್ಲ. ಜನಸಂಖ್ಯೆಗೆ ಅನುಗುಣವಾಗಿ ಈ ಸಮುದಾಯಕ್ಕೆ ಶೇ.12ರಷ್ಟು ಮೀಸಲಾತಿ ಸಿಗಬೇಕು. ಬೇರೆ ಸಮುದಾಯದವರು ತಮ್ಮ ಹಕ್ಕು ಕೇಳುವುದರಲ್ಲಿ ತಪ್ಪಿಲ್ಲ. ನಾವು ಅದನ್ನು ವಿರೋಧಿಸುವುದೂ ಇಲ್ಲ. ಆದರೆ ಒಕ್ಕಲಿಗರಿಗೆ ಸಿಗಬೇಕಾದ ಹಕ್ಕನ್ನು ನೀಡುವಂತೆ ನಾವು ಆಗ್ರಹಿಸುತ್ತಿದ್ದೇವೆ ಎಂದರು. ನಮ್ಮ ಸಮುದಾಯದ ಸ್ವಾಮೀಜಿಗಳ ನೇತೃತ್ವದಲ್ಲಿ ಕಂದಾಯ ಸಚಿವ ಅಶೋಕ್‌ಗೆ ಮನವಿ ಸಲ್ಲಿಸಿದ್ದೇವೆ.
ಸಮುದಾಯದ ಜನಸಂಖ್ಯೆ ಶೇ.15-16 ರಷ್ಟು ಇದ್ದರೂ ನಾವು ಶೇ.12ರಷ್ಟು ಮೀಸಲಾತಿ ಕೇಳಿದ್ದೇವೆ. ಬೇರೆಯವರ ಮೀಸಲಾತಿ ಕಿತ್ತುಕೊಂಡು ನಮಗೆ ಮೀಸಲಾತಿ ನೀಡುವುದು ಬೇಡ. ಬೇರೆಯವರಿಗೆ ಅನ್ಯಾಯ ಮಾಡಲು ನಾವು ಬಯಸುವುದಿಲ್ಲ ಎಂದರು.
ನಮ್ಮ ಸಮಾಜದ ಜನಸಂಖ್ಯೆ ಆಧಾರದಲ್ಲಿ ನಾವು ಶೇ.12ರಷ್ಟು ಕೇಳಿದ್ದು, ಸಚಿವರು ಸರ್ಕಾರಕ್ಕೆ ತಿಳಿಸಿ ಅದನ್ನು ನೀಡುವುದಾಗಿ ಹೇಳಿದ್ದರು. ಶೇ.12ರಷ್ಟುಮೀಸಲಾತಿ ನಮ್ಮ ಹಕ್ಕು ಅದಕ್ಕೆ ನಾವು ಸರ್ಕಾರವನ್ನು ಆಗ್ರಹಿಸುತ್ತೇವೆ ಎಂದರು.