ಬೆಂಗಳೂರು : ನನ್ನ ಹಾಗೂ ಸಿದ್ದರಾಮಯ್ಯ ಅವರ ನಡುವೆ ಉತ್ತಮ ಹೊಂದಾಣಿಕೆಯಿದೆ. ಆದರೆ ಬಿಜೆಪಿಯವರು ಈ ಬಗ್ಗೆ ಗುಲ್ಲೆಬ್ಬಿಸುತ್ತಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿ, ಸಿದ್ದರಾಮಯ್ಯ ಹಾಗೂ ನನ್ನ ನಡುವೆ ಮುಖ್ಯಮಂತ್ರಿ ಹುದ್ದೆ ಬಗ್ಗೆ ಜಗಳವಿದೆ ಎನ್ನುತ್ತೀರಲ್ಲ ಅದಕ್ಕೆ ಒಂದೇ ಒಂದು ಉದಾಹರಣೆ ಇದ್ದರೆ ತೋರಿಸಿ. ಇದೆಲ್ಲವೂ ಶುದ್ಧ ಸುಳ್ಳು ಎಂಧು ಸ್ಪಷ್ಟನೆ ಕೊಟ್ಟಿದ್ದಾರೆ.‘ಕಾಂಗ್ರೆಸ್ ಪಕ್ಷದಲ್ಲಿ ಕೆಲವರು ತಮ್ಮ ನಾಯಕರ ಪರವಾಗಿ ಭಾವನೆ, ಅಭಿಮಾನ ವ್ಯಕ್ತಪಡಿಸುತ್ತಾರೆ. ಆದರೆ, ನಾನು ಹಾಗೂ ಸಿದ್ದರಾಮಯ್ಯ ಅವರು ಒಂದು ಸಣ್ಣ ಸನ್ನಿವೇಶದಲ್ಲಿ ಕಿತ್ತಾಡಿರುವುದನ್ನು ತೋರಿಸಿ ನೋಡೋಣ.
ಬಿಜೆಪಿಯಲ್ಲಿನ ಕಿತ್ತಾಟದ ಬಗ್ಗೆ ಪಟ್ಟಿನೀಡಲೇ?’ ಎಂದು ಕೇಳಿದರು.ಬಿಜೆಪಿಯವರು ತಮ್ಮ ಮುಖ್ಯಮಂತ್ರಿ ಹುದ್ದೆ ಕುರಿತು ಮಾತನಾಡುವುದಕ್ಕಿಂತ ಹೆಚ್ಚಾಗಿ ಕಾಂಗ್ರೆಸ್ ಭವಿಷ್ಯದ ಮುಖ್ಯಮಂತ್ರಿ ಕುರಿತು ಮಾತನಾಡುವ ಮೂಲಕ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದನ್ನು ಒಪ್ಪಿಕೊಂಡಿದ್ದಾರೆ’ ಎಂದರು. ನನ್ನ ಹಾಗೂ ಸಿದ್ದರಾಮಯ್ಯ ಅವರ ನಡುವೆ ಉತ್ತಮ ಹೊಂದಾಣಿಕೆಯಿದೆ. ನಮ್ಮನ್ನು ಕೂರಿಸಿಕೊಂಡು ಹೈಕಮಾಂಡ್ ಸಲಹೆ ನೀಡಿದೆ ಎಂಬುದೂ ಸುಳ್ಳು.
ನಾನು ಹಾಗೂ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಜನವರಿಯಲ್ಲಿ ಒಟ್ಟಾಗಿ 20 ಜಿಲ್ಲೆಗಳಲ್ಲಿ ಬಸ್ ಯಾತ್ರೆ ನಡೆಸುತ್ತೇವೆ. ಬಳಿಕ ನಾನು ದಕ್ಷಿಣ, ಮಧ್ಯಕರ್ನಾಟಕ ಭಾಗ ಹಾಗೂ ಸಿದ್ದರಾಮಯ್ಯ ಅವರು ಉತ್ತರ ಕರ್ನಾಟಕ ಭಾಗದಲ್ಲಿ ಪ್ರತ್ಯೇಕ ಯಾತ್ರೆ ಮಾಡಲಿದ್ದೇವೆ. ಚುನಾವಣೆ ಹತ್ತಿರದಲ್ಲಿ ಸಿದ್ದರಾಮಯ್ಯ ಅವರು ದಕ್ಷಿಣ, ನಾನು ಉತ್ತರ ಭಾಗದಲ್ಲಿ ಪ್ರವಾಸ ಮಾಡುತ್ತೇನೆ’ ಎಂದು ಸ್ಪಷ್ಟಪಡಿಸಿದರು.