ಶಿವಮೊಗ್ಗ: ಕಾಂಗ್ರೆಸ್ ನವರಿಗೆ ಬಿಜೆಪಿಯವರು ಮುಸಲ್ಮಾನರ ಮತಗಳಿಗೆ ಎಲ್ಲಿ ಕೈ ಹಾಕ್ತಾರೋ ಅನ್ನೋ ಭಯ ಶುರುವಾಗಿದೆ ಎಂದು ಬಿಜೆಪಿ ಹಿರಿಯ ಶಾಸಕ ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ಗೆ ಮುಸ್ಲಿಮರ ಮತಗಳು ನೂರಕ್ಕೆ ನೂರರಷ್ಟು ಸಿಗುತ್ತವೆ ಎಂಬ ನಂಬಿಕೆ ಈ ಹಿಂದೆ ಇತ್ತು. ಆದರೆ ಈಗ ಆ ಮತಗಳು ಕೈತಪ್ಪುವ ಭಯ ಶುರುವಾಗಿದೆ ಎಂದು ಹೇಳಿದ್ದಾರೆ. ಹಿಂದುತ್ವದ ವಿಚಾರದಲ್ಲಿ ಬಿಜೆಪಿ ದೇಶದಲ್ಲಿ ಹೋರಾಟ ಮಾಡುತ್ತಿದೆ. ಕೇಂದ್ರದಲ್ಲಿ ಮೋದಿ ಸರ್ಕಾರ ಬಂದಿದೆ.
ಸಿದ್ದರಾಮಯ್ಯ ಒಂದು ಬಸ್ಸಿನಲ್ಲಿ, ಡಿ.ಕೆ.ಶಿವಕುಮಾರ್ ಇನ್ನೊಂದು ಬಸ್‌ನಲ್ಲಿ ಹೋಗ್ತೀನಿ ಎಂದಿದ್ದರು. ಎಲ್ಲಾ ಪಕ್ಷದಲ್ಲೂ ಭಿನ್ನಾಭಿಪ್ರಾಯ ಇದ್ದೇ ಇರುತ್ತದೆ. ಬಿಜೆಪಿಯಲ್ಲೂ ಇದೆ. ಆದರೆ, ಮಲ್ಲಿಕಾರ್ಜುನ ಖರ್ಗೆಯವರು ಒಂದೇ ಬಸ್‌ನಲ್ಲಿ ಹೋಗ್ಬೇಕು ಎಂದು ಹೇಳಿದ್ದಾರೆ. ಅದನ್ನು ಒಪ್ಪಿಕೊಂಡು ಬಂದಿದ್ದಾರೆ. ತುಂಬಾ ಸಂತೋಷ. ಮೇಲಿನವರು ಎಲ್ಲಾ ರಾಜಕೀಯ ಪಕ್ಷಕ್ಕೂ ಕಡಿವಾಣ ಹಾಕಿದಾಗ ಒಂದು ಶಿಸ್ತು ಬರುತ್ತದೆ ಎಂದು ಹೇಳಿದರು.
ಗುಜರಾತ್‌ನಲ್ಲೂ ನಿರೀಕ್ಷೆಗೂ ಮೀರಿ ಬೆಂಬಲ ಕೊಟ್ಟಿದ್ದಾರೆ. ನಮ್ಮ ರಾಜ್ಯದಲ್ಲೂ ಕೂಡ ಹಿಂದುತ್ವದ ಆಧಾರದ ಮೇಲೆ ಚುನಾವಣೆ ಮಾಡ್ತೇವೆ. 150ಕ್ಕೂ ಹೆಚ್ಚು ಸ್ಥಾನ ಗೆದ್ದು, ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದು ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದರು. ರಾಜಕಾರಣದಲ್ಲಿ ಭಿನ್ನಾಭಿಪ್ರಾಯ ಇದ್ದೇ ಇರುತ್ತದೆ ಎಂದರು.