ಬೆಂಗಳೂರು : ಸಿಡಿ ರಾಜಕಾರಣ ರಾಜ್ಯಕ್ಕೆ ಒಂದು ಕಳಂಕ ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿ, ಸಿಡಿ ವಿಚಾರ ರಾಜಕೀಯ ಮತ್ತು ನಾಯಕರಿಗೆ ಕೆಟ್ಟ ಹೆಸರನ್ನು ತರುವಂತಹ ಕೃತ್ಯ, ಇಂದಿನ ದಿನಗಳಲ್ಲಿ ಸಿಡಿ ರಾಜಕಾರಣವೇ ಒಂದು ಕೇಂದ್ರೀಕೃತ ಅಂಶವಾಗಿದೆ ಎಂದು ತಿಳಿಸಿದರು.
ನನ್ನ ಬಳಿ ಡಿಕೆಶಿವಕುಮಾರ್ , ಇತರೆ ರಾಜಕಾರಣಿಗಳ ಸಿಡಿ ಇವೆ ಎಂದು ರಮೇಶ್ ಜಾರಕಿಹೊಳಿ ಹೇಳುತ್ತಿದ್ದಾರೆ, ಈ ಕುರಿತು ಸಿಬಿಐ ತನಿಖೆ ಆಗಬೇಕು ಎಂಬುದು ಅವರ ಆಗ್ರಹವಾಗಿದೆ, ಈಗಾಗಲೇ ಈ ವಿಚಾರವಾಗಿ ರಮೇಶ್ ಜಾರಕಿಹೊಳಿ ಕೇಂದ್ರದ ಕೆಲವು ಮುಖಂಡರನ್ನು ಭೇಟಿ ಮಾಡಲು ದೆಹಲಿಗೆ ಹೋಗಿದ್ದಾರೆ, ಮತ್ತು ನಾನು ಕೂಡಾ ಸಿಎಂ ಬೊಮ್ಮಾಯಿಯವರಿಗೆ ವಿನಂತಿಸುತ್ತೇನೆ, ಈ ಸಿಡಿ ಪ್ರಕರಣವನ್ನು ಸಿಬಿಐಗೆ ನೀಡಬೇಕು, ಪಾರದರ್ಶಕ ತನಿಖೆಯಾಗಿ ನ್ಯಾಯ ದೊರಕುವಂತಾಗಬೇಕು ಎಂದು ಮನವಿ ಮಾಡುತ್ತೇನೆ ಎಂದರು.
ರಾಜಕೀಯದಲ್ಲಿ ಇಂತಹ ಸಂಗತಿಗಳು ಮನಸ್ಸಿಗೆ ನೋವು ತರುತ್ತವೆ ಮತ್ತು ಇಂತಹ ಪ್ರಕರಣಗಳು ಸಂಬಂಧಿತ ಪಕ್ಷಕ್ಕೆ ಹಾಗೂ ನಾಯಕರಿಗೆ ಮಾತ್ರ ಅಲ್ಲದೇ ರಾಜಕೀಯಕ್ಕೂ ಒಂದು ಕೆಟ್ಟ ಹೆಸರು ತರುತ್ತದೆ ಎಂದು ಅಭಿಪ್ರಾಯಪಟ್ಟರು.
ಇಂತಹ ದುಷ್ಕೃತ್ಯ ರಾಜ್ಯದಲ್ಲಿ ನಡೆಯಬಾರದು ತಪ್ಪಿತಸ್ಥರ ವಿರುದ್ಧ ಕ್ರಮವಾಗಬೇಕು, ತಪ್ಪಿತಸ್ಥರೆಂದು ತೀರ್ಮಾನವಾಗಲು ಸಿಬಿಐ ತನಿಖೆ ನಡೆಯಬೇಕು ಎಂದು ಒತ್ತಾಯಿಸಿದರು.