ಬೆಂಗಳೂರು: ಪಾರ್ಶ್ವವಾಯುಗೆ ಒಳಗಾಗಿ ಐದು ದಿನಗಳ ಕಾಲ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಸಂಪೂರ್ಣವಾಗಿ ಗುಣಮುಖರಾಗಿ ಇಂದು ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ.
ಈ ಬಗ್ಗೆ ಕುಮಾರಸ್ವಾಮಿ ಜತೆಗೆ ಅಪೋಲೋ ಆಸ್ಪತ್ರೆಯಲ್ಲಿ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ವೈದ್ಯರಾದ ಡಾ.ಗೋವಿಂದಯ್ಯ ಮಾತನಾಡಿ, ‘ಕುಮಾರಸ್ವಾಮಿ ಅವರಿಗೆ ಏನಾಗ್ತಿದೆ ಎಂದು ಎಲ್ಲರೂ ಕೂಡ ಕಾಯುತ್ತಿದ್ದರು. ಅವರು ಫಿಟ್ ಆಗಿ ಮನೆಗೆ ಹೋಗ್ತಿದ್ದಾರೆ. ಕುಮಾರಸ್ವಾಮಿಯವರಿಂದಲೇ ಪಾರ್ಶ್ವವಾಯು ಬಗ್ಗೆ ಜಾಗೃತಿ ಮೂಡಿಸಬೇಕು; ಆದ್ದರಿಂದಲೇ ಸುದ್ದಿಗೋಷ್ಠಿ ಕರೆದಿದ್ದೇವೆ’ ಎಂದು ಹೇಳಿದರು.
ಇದನ್ನೂ ಓದಿ; ನನಗೆ ಇದು 3ನೇ ಮರುಜನ್ಮ, ಪಾರ್ಶ್ವವಾಯು ಬಗ್ಗೆ ನಿರ್ಲಕ್ಷ್ಯ ಬೇಡ : ಹೆಚ್ ಡಿಕೆ
ಅಪೋಲೋ ಆಸ್ಪತ್ರೆ ಮತ್ತೋರ್ವ ವೈದ್ಯರಾದ ಡಾ.ಸತೀಶ್ ಚಂದ್ರ ಮಾತನಾಡಿ, ‘ಪಾರ್ಶ್ವವಾಯು (Stroke) ಸಾಮಾನ್ಯ ಖಾಯಿಲೆ. ಅದರ ಬಗ್ಗೆ ತಿಳಿದುಕೊಂಡು ಜಾಗೃತಿ ಮೂಡಿಸಬೇಕಾಗಿದೆ. ಸ್ಟ್ರೋಕ್ ಸೂಚನೆ ನೋಡಿಕೊಂಡು ಆಸ್ಪತ್ರೆಗಳಿಗೆ ಬರಬೇಕಾಗುತ್ತದೆ. ಯಾವುದೇ ಮನುಷ್ಯನಿಗೆ ಕೈನಲ್ಲಿ ಸ್ವಾಧೀನ ಕಡಿಮೆಯಾದ್ರೆ, ಮಾತು ತೊದಲಿದರೆ, ಕಣ್ಣಲ್ಲಿ ದೃಷ್ಟಿ ಕಡಿಮೆ ಆದ ಲಕ್ಷಣ ಕಾಣಿಸಿಕೊಂಡರೆ ತುರ್ತಾಗಿ ಆಸ್ಪತ್ರೆಗೆ ಬರಬೇಕಾಗುತ್ತದೆ. ಸ್ಟ್ರೋಕ್ ಆದ 3 ಗಂಟೆ ಒಳಗೆ ಆಸ್ಪತ್ರೆಗೆ ಬರಬೇಕಾಗುತ್ತದೆ. ‘ಗೋಲ್ಡನ್ ಹವರ್’ನಲ್ಲಿ ಚಿಕಿತ್ಸೆ ನೀಡುತ್ತೇವೆ’ ಎಂದು ಹೇಳಿದರು.
‘ಮದ್ಯಸೇವನೆ, ದಪ್ಪ ಇರೋದು ಹಾಗೂ ಮಧುಮೇಹ ಇರುವವರಿಗೆ ಸ್ಟ್ರೋಕ್ ಬರುವ ಸಾಧ್ಯತೆ ಜಾಸ್ತಿ ಇದೆ. ಸುದ್ದಿ ಮಾಧ್ಯಮದ ಮೂಲಕ ಸ್ಟ್ರೋಕ್ ಕಡಿಮೆ ಮಾಡುವ ಜಾಗೃತಿ ಕೆಲಸ ಮಾಡುತ್ತಿದ್ದೇವೆ; ಎಲ್ಲರೂ ಜಾಗೃತರಾಗಬೇಕು’ ಎಂದು ಅವರು ಹೇಳಿದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.