ಬೆಂಗಳೂರು: ಮಾಜಿ ಲೋಕಸಭಾ ಸದಸ್ಯ ಎಲ್.ಆರ್.ಶಿವರಾಮೇ ಗೌಡ ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ.
ಪಕ್ಷದ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಲ್.ಆರ್. ಶಿವರಾಮೇಗೌಡರನ್ನು ಪಕ್ಷದ ಪ್ರಮುಖರು ಹೂಗುಚ್ಛ ನೀಡಿ ಆತ್ಮೀಯವಾಗಿ ಬರಮಾಡಿಕೊಂಡರು.
ಬರಲಿರುವ ವಿಧಾನಸಭೆ ಚುನಾವಣೆಯಲ್ಲಿ ಮಂಡ್ಯ ಜಿಲ್ಲೆಯ ನಾಗಮಂಗಲ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಶಿವರಾಮೇ ಗೌಡರ ಜೊತೆಗೆ ಈ ಸಂದರ್ಭದಲ್ಲಿ ಅವರ ಪುತ್ರ ಮತ್ತು ಬೆಂಬಲಿಗರು ಕೂಡ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ನಳೀನ್ ಕುಮಾರ್ ಕಟೀಲ್ ಟ್ವಿಟ್ಟರ್ ನಲ್ಲಿ ಫೋಟೋ ಹಂಚಿಕೊಂಡಿದ್ದು, ಪಕ್ಷಕ್ಕೆ ಸೇರ್ಪಡೆಯಾದವರಿಗೆ ಶುಭ ಹಾರೈಸಿದ್ದಾರೆ.
ನಾನು ಬಿಜೆಪಿ ಪಕ್ಷ ಸೇರುವ ಪ್ರಕ್ರಿಯೆಗಳು ನಡೆಯುತ್ತಿವೆ. ಅದು ಅಂತಿಮಗೊಳ್ಳದೆ ನಾನು ಬಿಜೆಪಿ ಸೇರಿದ್ದೇನೆ ಎಂದು ಹೇಳಲಾಗುವುದಿಲ್ಲ. ಬಹುತೇಕ ನಾನು ಬಿಜೆಪಿ ಸೇರುವುದಕ್ಕೆ ನಿರ್ಧರಿಸಿದ್ದೇನೆ. ಯಾವಾಗ ಎನ್ನುವುದು ನಿರ್ಧಾರವಾಗಬೇಕಾಗಿದೆ ಎಂದು ಕೆಲವು ದಿನಗಳ ಹಿಂದೆ ಎಲ್ ಆರ್ ಶಿವರಾಮೇಗೌಡ ಹೇಳಿದ್ದರು. ಇದೀಗ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.