ಬೆಳಗಾವಿ: ಗೋಕಾಕ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಮೇಶ್ ಜಾರಕಿಹೊಳಿ ಹೆಚ್ಚಿನ ಮತಗಳಿಂದ ಗೆಲ್ಲುತ್ತಾರೆ ಎಂದು ಲಖನ್ ಜಾರಕಿಹೊಳಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ಕನಿಷ್ಠ 50,000 ಮತಗಳ ಅಂತರದಿಂದ ರಮೇಶ್ ಜಾರಕಿಹೊಳಿ ಜಯಗಳಿಸಲಿದ್ದಾರೆ ಎಂದು ಹೇಳಿದ್ದಾರೆ. ರಮೇಶ್ ಜಾರಕಿಹೊಳಿ ಕೇವಲ ಗೋಕಾಕನಲ್ಲಿ ಮಾತ್ರ ಅಲ್ಲ, ಇಡೀ ಬೆಳಗಾವಿಯಲ್ಲಿ ಅತ್ಯಂತ ಜನಪ್ರಿಯ ಮತ್ತು ಜನಾನುರಾಗಿ ವ್ಯಕ್ತಿಯೆನಿಸಿಕೊಂಡಿದ್ದಾರೆ ಎಂದರು. ಅವರನ್ನು ಸೋಲಿಸಲು ಕಾಂಗ್ರೆಸ್ ಪಕ್ಷದ ದೊಡ್ಡ ದೊಡ್ಡ ನಾಯಕರೆಲ್ಲ ಗೋಕಾಕ ಕ್ಷೇತ್ರಕ್ಕೆ ಬಂದಿದ್ದು ನಿಜವಾದರೂ, ರಮೇಶ್ ಅವರ ಪ್ರಭಾವದ ಮೇಲೆ ಅದು ಯಾವುದೇ ಪ್ರಭಾವ ಬೀರಿಲ್ಲ ಎಂದು ಹೇಳಿದರು.
ಬೆಳಗಾವಿ ಗ್ರಾಮಾಂತರ ಕ್ಷೇತ್ರದಲ್ಲಿ ಯಾರೇ ಬಂದರೂ ಬಿಜೆಪಿಯನ್ನು ಗೆಲ್ಲಿಸುತ್ತೇನೆ ರಮೇಶ್ ಜಾರಕಿಹೊಳಿ ಹೇಳಿದ್ದರು. ಬೆಳಗಾವಿ ಗ್ರಾಮಾಂತರ ಕ್ಷೇತ್ರ ಬಯಲಾಗಿದೆ, ಈ ಕದನಕ್ಕೆ ಯಾರು ಬೇಕಾದರೂ ಬರಬಹುದು ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಮೂರು ತಿಂಗಳ ಹಿಂದೆ ನಾಯಕಿಯಂತೆ ಸವಾಲು ಹಾಕಿದ್ದರು, ಹೀಗಾಗಿ ನಾನು ಮೈದಾನಕ್ಕಿಳಿದಿದ್ದೇನೆ. ಪಕ್ಷದ ಅಭ್ಯರ್ಥಿ ಯಾರೇ ಆಗಿದ್ದರೂ ಬಿಜೆಪಿ ಗೆಲ್ಲಿಸುತ್ತೇನೆ ಎಂದಿದ್ದರು.