ಚಿಕ್ಕೋಡಿ: ಪಕ್ಷದಲ್ಲಿ ನನಗೆ ಮಾನಸಿಕವಾಗಿ ಹಿಂಸೆ ಆಗುತ್ತಿತ್ತು, ನಾನು ನಂಬಿದ ತಾಯಿ ಬಿಜೆಪಿ ಬೇರೆಯವರಿಗೆ ಆದ್ಯತೆ ನೀಡಿದ್ದರಿಂದ ನಾನು ಪಕ್ಷದಿಂದ ಹೊರಗೆ ಬರುತ್ತಿದ್ದೇನೆ ಎಂದು ಲಕ್ಷ್ಮಣ್ ಸವದಿ ಸ್ಪಷ್ಟನೆ ನೀಡಿದರು.
ಮಾಧ್ಯಮ ಜೊತೆ ಮಾತನಾಡಿ, ನಾನು ಟಿಕೆಟ್ ವಿಚಾರಕ್ಕೆ ಮಾತ್ರ ಪಕ್ಷ ಬಿಡುತ್ತಿಲ್ಲ ನನಗಾಗಿರುವ ನೋವಿನಿಂದ ಪಕ್ಷ ಬಿಡುತ್ತಿದ್ದೇನೆ. ನನಗೆ ಯಾರ ಮೇಲೂ ದ್ವೇಷ ಇಲ್ಲ, ನಾಳೆ ಬೆಳಗ್ಗೆ ವಿಧಾನಪರಿಷತ್ ಸದಸ್ಯ ಸ್ಥಾನಕ್ಕೆ ಸಭಾಪತಿಗಳಿಗೆ ರಾಜೀನಾಮೆ ಕೊಡಲಾಗುವುದು ಎಂದು ಘೋಷಣೆ ಮಾಡಿದರು.
ಸಿಎಂ ಬಸವರಾಜ ಬೊಮ್ಮಾಯಿ ನನ್ನ ಹಳೆ ಸ್ನೇಹಿತ, ನನಗೆ ಪಕ್ಷದಲ್ಲಿ ಹಿಂಸೆ ಆಗಿದೆ, ಹಾಗಾಗಿ ನಾನು ಬಿಜೆಪಿ ತೊರೆಯುತ್ತಿದ್ದೇನೆ. ನನ್ನ ಗಮನಕ್ಕೆ ಬಾರದೆ ಡಿಸಿಎಂ ಸ್ಥಾನದಿಂದ ನನ್ನ ತೆಗೆದಿದ್ದು ಯಾಕೆ? ಅನ್ನೋದಷ್ಟೇ ನನ್ನ ಪ್ರಶ್ನೆ ಮೊದಲೇ ಹೇಳಿದ್ದರೆ ಡಿಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೆ, ಡಿಸಿಎಂ ಸ್ಥಾನದಿಂದ ನನ್ನ ಕೆಳಗಿಳಿಸಲು ನಾನೇನು ಭ್ರಷ್ಟಾಚಾರ ಮಾಡಿದ್ನಾ? ಅಥವಾ ಲಂಚ ತಿಂದಿದ್ನಾ? ಯಾಕೆ ಡಿಸಿಎಂ ಸ್ಥಾನದಿಂದ ಕೆಳಗಿಳಿಸಿದಿರಿ ಎಂದು ಮಾಧ್ಯಮದ ಮೂಲಕ ಪ್ರಶ್ನಿಸಿದರು.