ಅಥಣಿ: ಬಿಜೆಪಿ ವರಿಷ್ಠರು ನನಗೆ ಕೊನೆ ಹಂತದಲ್ಲಿ ಟಿಕೆಟ್ ತಪ್ಪಿಸಿದ್ದಾರೆ, ಇದರಿಂದ ನನಗೆ ತೀವ್ರ ನೋವಾಗಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಲಕ್ಷ್ಮಣ್ ಸವದಿ ಹೇಳಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿ, ಬಿಜೆಪಿಯಲ್ಲಿ ಹಳೆ ತತ್ತ್ವ ಸಿದ್ಧಾಂತಕ್ಕೆ ಬೆಲೆ ಇಲ್ಲ. ಸದ್ಯ ಬಿಜೆಪಿ ಪಕ್ಷದಲ್ಲಿ ತುಂಬಾ ಬದಲಾವಣೆ ಆಗಿದೆ, ನಾಳೆ ಕಾರ್ಯಕರ್ತರ ಸಭೆ ಕರೆದು ಒಂದು ತೀರ್ಮಾನಕ್ಕೆ ಬರುತ್ತಿದ್ದೇನೆ ಎಂದರು. ಅಭಿಮಾನಿಗಳು ವಿಧಾನಪರಿಷತ್ ಸದಸ್ಯ ಸ್ಥಾನಕ್ಕೆ ಹಾಗೂ ಬಿಜೆಪಿ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಎಂದು ಹೇಳಿದ್ದಾರೆ. ನಾಳೆ ಸಂಜೆ ಐದು ಗಂಟೆಗೆ ಒಂದು ಅಂತಿಮ ತೀರ್ಮಾನಕ್ಕೆ ಬರಲಾಗುವುದು ಎಂದು ಹೇಳಿದರು.
ಸಿಎಂ ಬೊಮ್ಮಾಯಿ ಮೇಲೆ ನನಗೆ ಸಿಟ್ಟಿಲ್ಲ. ಅವರು ಇನ್ನು ಉನ್ನತ ಮಟ್ಟಕ್ಕೆ ಬೆಳೆಯಲಿ. ಈ ದೇಶದ ಪ್ರಧಾನಿ ಮಂತ್ರಿ ಆಗಲೆಂದು ಬಯಸುವೆ. ನಾನು ಎಲ್ಲಿಯೇ ಇರಲಿ, ಹೇಗಿಯೇ ಇರಲಿ, ನನಗೊಬ್ಬರು ಗುರುವಿದ್ದಾರೆ. ಅವರ ಹೆಸರು ಹೇಳಲು ಇಚ್ಛಿಸುವುದಿಲ್ಲ, ನನ್ನ ನಿರ್ಧಾರವನ್ನು ಕ್ಷಮಿಸಿ ಎಂದು ಕೇಳಿಕೊಂಡಿದ್ದೇನೆ ಅಂತಾ ಸವದಿ ಭಾವುಕರಾದರು.
ಇನ್ನೂ ಟಿಕೆಟ್ ಕೈ ತಪ್ಪುತ್ತಿದ್ದಂತೆ ಅಥಣಿ ನಿವಾಸದಲ್ಲಿ ಲಕ್ಷ್ಮಣ್ ಸವದಿ ಅವರನ್ನು ಕಾಂಗ್ರೆಸ್ ರಾಜು ಕಾಗೆ ಭೇಟಿ ಮಾಡಿದ್ದು, ಹೊಸದೊಂದು ಚರ್ಚೆ ಹುಟ್ಟು ಹಾಕಿದೆ.