ಬೆಂಗಳೂರು: ‘ಹಿಂದೂಗಳು ಬೆಳಗ್ಗೆ ಎದ್ದರೆ ಗಣಪತಿಯನ್ನ ನೆನಪು ಮಾಡಿಕೊಳ್ತೀವಿ, ನಾನು ಲಕ್ಷ್ಮಿ ಶ್ಲೋಕ ಹೇಳುತ್ತೇನೆ. ಹಿಂದೂ ಧರ್ಮದ ವಿರುದ್ದ ಅವಹೇಳನಕಾರಿಯಾಗಿ ನಾನು ಮಾತಾಡಿಲ್ಲ. ಅದನ್ನ ಬೇರೆ ರೀತಿ ಅರ್ಥೈಸುವ ಕೆಲಸವನ್ನು ಯಾವತ್ತು ಮಾಡಿಲ್ಲ’ ಎಂದು ಗೃಹ ಸಚಿವ ಪರಮೇಶ್ವರ್ ತಮ್ಮ ಮೇಲಿನ ಬಿಜೆಪಿಗರ ಟೀಕೆಗಳಿಗೆ ಸ್ಪಷ್ಟನೆ ನೀಡಿದರು.
ಹಿಂದೂ ಧರ್ಮ ಹುಟ್ಟಿದ್ದು ಯಾವಾಗ, ಹುಟ್ಟಿಸಿದ್ದು ಯಾರು ಎಂಬ ಪರಮೇಶ್ವರ್ ಪ್ರಶ್ನೆಗೆ ಬಿಜೆಪಿ ನಾಯಕರು ವಾಗ್ದಾಳಿ ನಡೆಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಗೃಹಸಚಿವರು, ‘ನಾವೆಲ್ಲ ಹಿಂದೂಗಳು, ಬೆಳಗ್ಗೆ ಎದ್ದರೆ ಗಣಪತಿಯನ್ನ ನೆನಪು ಮಾಡಿಕೊಳ್ತೀವಿ. ನಾನು ಬೆಳೆಗ್ಗೆ ಎದ್ದ ಕೂಡಲೇ ಲಕ್ಷ್ಮಿ ಶ್ಲೋಕ ಹೇಳುತ್ತೇನೆ. ಮಲಗೋವಾಗ ಹನುಮನ ಶ್ಲೋಕ ಹೇಳ್ತೀನಿ’ ಎಂದ ಅವರು, ಮಾಧ್ಯಮಗಳ ಕ್ಯಾಮೆರಾ ಮುಂದೆಯೇ ಎರಡು ಶ್ಲೋಕಗಳನ್ನು ಹೇಳಿದರು.
ಇದನ್ನೂ ಓದಿ; ‘ಅಸ್ಪೃಶ್ಯತೆ ವಿರುದ್ಧ ಹೋರಾಡಿದವರೆಲ್ಲ ಸನಾತನ ಧರ್ಮದ ವಿರೋಧಿಗಳೆ’
‘ಬಿಜೆಪಿಯವರಿಗೆ ಈ ಶ್ಲೋಕಗಳು ಬರೊಲ್ಲ. ಅವರಿಗೆ ಕೇಳಿ ನೋಡಿ ಇದನ್ನ ಹೇಳ್ತಾರಾ ಅಂತ. ಅದಕ್ಕೆ ನಾನು ಹೇಳಿದ್ದು, ಧರ್ಮ ಅಧರ್ಮ ಆದಾಗ, ನೀತಿ, ಅನೀತಿ ಆದಾಗ ಕೃಷ್ಣ ನಾನು ಮತ್ತೆ ಹುಟ್ಟಿ ಬರುತ್ತೇನೆ ಎಂದು ಹೇಳುತ್ತಾನೆ. ಇದನ್ನೆ ನಾನು ಹೇಳಿದ್ದು ಯಧಾ ಯಧಾಹೀ ಧರ್ಮಸ್ಯ ಅಂತ. ಹಿಂದೂ ಧರ್ಮ ಯಾವಾಗ ಹುಟ್ಟಿತು ಅಂತ ನಾನು ಪ್ರಶ್ನೆ ಮಾಡಿಲ್ಲ. ಪದೇಪದೆ ನಾನು ಅದನ್ನೆ ಹೇಳಲು ಉದ್ಯೋಗ ಅಲ್ಲ. ನಾನು ಹೇಳಿದ್ದು ಸರ್ವಪಲ್ಲಿ ರಾಧಾಕೃಷ್ಣನ್ ಅವರು ಈ ದೇಶದಲ್ಲಿ ಹುಟ್ಟಿದ ಧರ್ಮದ ಬಗ್ಗೆ ಸ್ಟಡಿ ಮಾಡಿದ್ರು. ಅವರು ಹೇಳಿದ್ದನ್ನೇ ನಾನು ಹೇಳಿದ್ದು’ ಎಂದರು.
‘ಅವರ ಪ್ರಕಾರ ಜೈನ, ಮುಸ್ಲಿಂ ಧರ್ಮ ಸ್ಥಾಪನೆ ಮಾಡಿದವರು ಇದ್ದರು. ಆದರೆ, ಹಿಂದೂ ಧರ್ಮಕ್ಕೆ ಸ್ಥಾಪಕರು ಇಲ್ಲ ಎಂದು ಹೇಳಿದ್ದರು. ಅಷ್ಟು ಹೇಳಿದ್ದಕ್ಕೆ ಬಿಜೆಪಿ ಅವರು ಬೊಬ್ಬೆ ಹೊಡೆಯುತ್ತಿದ್ದಾರೆ. ನಾನೇನು ಅವಹೇಳನಕಾರಿಯಾಗಿ ಮಾತಾಡಿಲ್ಲ. ಹಿಂದೂ ಧರ್ಮದ ಮೇಲೆ ನಮಗೆ ಇರೋ ಗೌರವ ಅವರಿಗೆ ಇದೆಯಾ’ ಎಂದು ಪ್ರಶ್ನಿಸಿದ ಪರಮೇಶ್ವರ್, ಹಿಂದೂ ಧರ್ಮದ ವಿರುದ್ದ ಹೇಳಿಕೆಗೆ ಸ್ಪಷ್ಟನೆ ನೀಡಿದರು.
ಪರಮೇಶ್ವರ್ ಹೇಳಿಕೆಗೆ ಯಡಿಯೂರಪ್ಪ ವಿರೋಧ ವಿಚಾರವಾಗಿ ಮಾತನಾಡಿ, ‘ಯಡಿಯೂರಪ್ಪ ಅವರ ಟ್ವೀಟ್ ನೋಡಿದೆ, ಅವರಿಗೂ ಒಂದು ಕಾಲದಲ್ಲಿ ಹಾಗೆ ಇತ್ತು. ಅವರು ದೊಡ್ಡವರು, ಹಿರಿಯರಿದ್ದಾರೆ. ನಾನು ಅವರ ಬಗ್ಗೆ ಮಾತಾಡೊಲ್ಲ. ನಾನು ಅವಹೇಳನಕಾರಿಯ ಮಾತು ಆಡಿಲ್ಲ. ಮುಂದೆ ಮತ್ತೆ ಅದನ್ನ ವಿಶ್ಲೇಷಣೆ ಮಾಡೋದು ಅರ್ಥವಿಲ್ಲ’ ಎಂದು ಹೇಳಿದರು.
ಇದನ್ನೂ ಓದಿ; ‘ಇಂಡಿಯಾ’ ಹೆಸರು ಬದಲಾಯಿಸುವುದು ದೇಶದ ಬಹುತ್ವದ ಮೇಲಿನ ದಾಳಿ: ಕೇರಳ ಸಿಎಂ
ಬಿಎಸ್‌ವೈ ಹೇಳಿದ್ದೇನು?
ಪರಮೇಶ್ವರ್ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ‘ಹಿಂದೂ ಧರ್ಮದ ಅಸ್ತಿತ್ವ, ಮೂಲದ ಬಗ್ಗೆ ಹಿರಿಯ ಕಾಂಗ್ರೆಸ್ ನಾಯಕ, ಗೃಹ ಸಚಿವ ಪರಮೇಶ್ವರ್ ಅವರ ಉದ್ಧಟತನದ ಹೇಳಿಕೆ ಅತ್ಯಂತ ಖಂಡನೀಯ ಮಾತ್ರವಲ್ಲ, ಅವರ ಬೇಜವಾಬ್ದಾರಿತನಕ್ಕೆ ಹಿಡಿದ ಕನ್ನಡಿಯಾಗಿದೆ’ ಎಂದು ಕಿಡಿಕಾರಿದ್ದರು.
‘ರಾಷ್ಟ್ರಗೀತೆಯ ಅಂತ್ಯದಲ್ಲಿ ‘ಜೈ ಹಿಂದ್’ ಎನ್ನುವ ಜಯಘೋಷ, ನಮ್ಮ ತಾಯ್ನೆಲ, ಇಲ್ಲಿನ ಸಾವಿರಾರು ವರ್ಷಗಳ ಇತಿಹಾಸ, ಸಂಸ್ಕೃತಿ, ರಾಷ್ಟ್ರಧರ್ಮ, ಜೀವನ ಪದ್ಧತಿಯ ಸಂಕೇತವಾಗಿದೆ. ಕೇವಲ ರಾಜಕೀಯ ಲಾಭಕ್ಕಾಗಿ ಹೊಣೆಗೇಡಿತನದ ಮಾತುಗಳನ್ನಾಡಿ ಪರಮೇಶ್ವರ್ ಅವರು ತಮ್ಮ ಘನತೆಗೆ ತಾವೇ ಕುಂದು ತಂದುಕೊಂಡಿದ್ದಾರೆ. ಕೋಟ್ಯಂತರ ಭಾರತೀಯರ ಭಾವನೆಗಳಿಗೆ ಘಾಸಿಯುಂಟು ಮಾಡುವ, ರಾಷ್ಟ್ರದ ಅಸ್ಮಿತೆಯಂತಹ ವಿಷಯಗಳ ಬಗ್ಗೆ ತಿಳಿದುಕೊಳ್ಳದೆ, ಹಗುರವಾಗಿ ಮಾತನಾಡುವುದು ಸರಿಯಲ್ಲ’ ಎಂದು ಬರೆದುಕೊಂಡಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.