ಬೆಳಗಾವಿ: ನಮ್ಮ ಕ್ಷೇತ್ರದಲ್ಲಿ ನಾನು ಯಾರಿಗೂ ಗಿಫ್ಟ್ ಕೊಟ್ಟಿಲ್ಲ, ಗಿಫ್ಟ್ ಅಂತಾ ಆಗಿದ್ರೆ ನಾನು ಪುರುಷರಿಗೂ ಕೊಡಬೇಕಾಗಿತ್ತಲ್ವಾ? ಎಂದು ಶಾಸಕ ರಮೇಶ್ ಜಾರಕಿಹೊಳಿ ಆರೋಪಕ್ಕೆ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ತಿರುಗೇಟು ನೀಡಿದ್ದಾರೆ.
ಪ್ರತಿವರ್ಷ ಗ್ರಾಮೀಣ ಉತ್ಸವ ಆಯೋಜನೆ ಮಾಡುತ್ತಾ ಮಹಿಳೆಯರಿಗೆ ಅರಿಶಿಣ, ಕುಂಕುಮ ಕೊಡುವ ಸಂಪ್ರದಾಯ ಬೆಳೆಸಿಕೊಂಡಿದ್ದು, ಅದನ್ನೇ ಮುಂದುವರೆಸಿಕೊಂಡು ಬಂದಿದ್ದೇನೆ. ಒಂದು ವೇಳೆ ಗಿಫ್ಟ್ ಕೊಡುವುದಾಗಿದ್ದರೆ ಪುರುಷ ಮತದಾರರಿಗೂ ಕೊಡುತ್ತಿದ್ದೆ, ಮತದಾರರು ಕೇವಲ ಮಹಿಳೆಯರಷ್ಟೇ ಇಲ್ಲ ಪುರುಷರು ಇದ್ದಾರೆ. ಆದರೆ ಒಬ್ಬಳು ಮನೆ ಮಗಳು ಅಂತಾ ನಾನಿವತ್ತು ಕರೆಸಿಕೊಳ್ಳುತ್ತೇನೆ. ಕ್ಷೇತ್ರದಲ್ಲಿ ನನ್ನ ಗಿಫ್ಟ್ ಅಷ್ಟೇ ಏಕೆ ನೋಡ್ತೀರಾ.? ನಾನು ಮಾಡಿದ ಒಳ್ಳೆಯ ಕಾರ್ಯಗಳನ್ನು ನೋಡಿ. ಗುಡಿಗಳನ್ನು, ಜೈನ ಬಸದಿಗಳನ್ನು ಕಟ್ಟಿಸಿದ್ದು ನೋಡಿ ಎಂದು ಪ್ರತಿಕ್ರಿಯಿಸಿದರು.
ಲಕ್ಷ್ಮೀ ಹೆಬ್ಬಾಳ್ಕರ್ ಶಾಸಕರಾದ ಮೇಲೆ ಅವರ ಚೇಲಾಗಳಿಂದ ಬಾರ್, ಕ್ಲಬ್‌ಗಳು ಜಾಸ್ತಿ ಆಗಿವೆ ಎಂದು ಹೇಳುತ್ತಿದ್ದಾರೆ. ಮೇಲಿನಿಂದ ಕೆಳಗಿನವರೆಗೂ ಅವರದ್ದೇ ಸರ್ಕಾರಗಳಿವೆ ಈ ಬಗ್ಗೆ ಅವರೇ ಅನುಮತಿ ನೀಡಿದ್ದು, ಸಮೀಕ್ಷೆ ಮಾಡಲಿ. ನನ್ನ ಕ್ಷೇತ್ರಕ್ಕೆ ನನ್ನ ಕುಟುಂಬಕ್ಕೆ ನಾನು ಏನು ಅಂತಾ ಗೊತ್ತಿದೆ. ನಾನು ಏನು ಕೆಲಸ ಮಾಡಿದ್ದೀನಿ ಗೊತ್ತಿದೆ. ನನ್ನ ಕೆಲಸ ನೆನೆಸಿಕೊಂಡ ಮಹಿಳೆಯರಿಗೆ ಧನ್ಯವಾದ ಹೇಳುವೆ ಎಂದು ತಿಳಿಸಿದ್ದಾರೆ.