ಮುಂಬೈ : ಆಗಸ್ಟ್ ಅಂತ್ಯಕ್ಕೆ ಮುಂಬೈನಲ್ಲಿ ನಡೆಯಲಿರುವ ಸಭೆಯಲ್ಲಿ ಭಾರತ ರಾಷ್ಟ್ರೀಯ ಅಭಿವೃದ್ಧಿ ಅಂತರ್ಗತ ಒಕ್ಕೂಟ (ಇಂಡಿಯಾ) ದ ಲೋಗೋವನ್ನು ಅನಾವರಣಗೊಳಿಸಲಾಗುವುದು ಎಂದು ಕಾಂಗ್ರೆಸ್ ನಾಯಕ ಅಶೋಕ್ ಚವಾಣ್ ಶನಿವಾರ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚವಾಣ್, ಸುಮಾರು 26 ರಿಂದ 27 ಪಕ್ಷಗಳು ಇಂಡಿಯಾ ಒಕ್ಕೂಟದ ಮೂರನೇ ಸಭೆಯಲ್ಲಿ ಭಾಗವಹಿಸಲಿವೆ. ಆಗಸ್ಟ್ 31ರಂದು ಸಂಜೆ ಮುಂಬೈನಲ್ಲಿ ಅನೌಪಚಾರಿಕ ಸಭೆ ಮತ್ತು ಸೆಪ್ಟೆಂಬರ್ 1ರಂದು ಔಪಚಾರಿಕ ಸಭೆ ನಡೆಯಲಿದೆ. ಇಲ್ಲಿಯವರೆಗೆ ಎರಡು ಸಭೆಗಳನ್ನು ಆಯೋಜಿಸಲಾಗಿದೆ. ಮೂರನೇ ಸಭೆ ಅತ್ಯಂತ್ಯ ಮಹತ್ವದ್ದಾಗಿದ್ದು, ಮುಂದಿನ ಕಾರ್ಯಸೂಚಿಯ ಕುರಿತು ಚರ್ಚಿಸಲಾಗುವುದು. ಆಗಸ್ಟ್ 31ರಂದು ಒಕ್ಕೂಟದ ಲೋಗೋ ಅನಾವರಣಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : ರಾಜ್ಯ ಬಿಜೆಪಿ ನಾಯಕರ ಮೇಲೆ ಮುಂದುವರಿದ ಮೋದಿ ಮುನಿಸು!
ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಶತಾಯಗತಾಯ ಸೋಲಿಸಲೇಬೇಕೆಂದು ಪಣ ತೊಟ್ಟಿರುವ ಪ್ರತಿಪಕ್ಷಗಳ ಒಕ್ಕೂಟ ಇಂಡಿಯಾ, ಈಗಾಗಲೇ ಮೊದಲ ಸಭೆಯನ್ನು ಬಿಹಾರದ ಪಾಟ್ನಾದಲ್ಲಿ ಮತ್ತು ಎರಡನೇ ಸಭೆಯನ್ನು ಬೆಂಗಳೂರಿನಲ್ಲಿ ನಡೆಸಿದೆ. ಬೆಂಗಳೂರಿನಲ್ಲಿ ನಡೆದ ಎರಡನೇ ಸಭೆಯಲ್ಲಿ ಒಕ್ಕೂಟದ ಹಳೆಯ ಹೆಸರು ಯುಪಿಎ ಬದಲಿಸಿ ‘ಇಂಡಿಯಾ’ ಎಂದು ಮರುನಾಮಕರಣ ಮಾಡಲಾಗಿದೆ.
ಇದೇ ಸಭೆಯಲ್ಲಿ ಒಕ್ಕೂಟದ ಸಮನ್ವಯ ಸಮಿತಿಯನ್ನೂ ರಚಿಸಲಾಗಿದ್ದು, ಈ ಸಮಿತಿಗೆ ಮುಖ್ಯಸ್ಥರನ್ನು 3ನೇ ಸಭೆಯಲ್ಲಿ ಆಯ್ಕೆ ಮಾಡುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ. ಈ ಎಲ್ಲಾ ಕಾರಣಗಳಿಂದ ಇಂಡಿಯಾ ಒಕ್ಕೂಟದ ಮೂರನೇ ಸಭೆ ಮಹತ್ವ ಪಡೆದುಕೊಂಡಿದೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
.