ಬೆಂಗಳೂರು : ನಾನು ಬಿಜೆಪಿ ಪರವಾಗಿ ಕೆಲಸ ಮಾಡುತ್ತೇನೆ, ಬಿಜೆಪಿಯನ್ನು ಬೆಂಬಲಿಸುತ್ತೇನೆ ಎಂದು ಮಾಜಿ ಸಂಸದ ಎಲ್ ಆರ್ ಶಿವರಾಮೇಗೌಡ ಹೇಳಿದರು.
ನಾಗಮಂಗಲದ ಬೆಂಗಳೂರು ನಿವಾಸಿಗಳ ಬೃಹತ್ ಸಮಾವೇಶದಲ್ಲಿ ಮಾತನಾಡಿ, ನಾಗಮಂಗಲ ಬಿಜೆಪಿಯಿಂದ ದೂರ ಉಳಿದಿತ್ತು. ನಾಗಮಂಗಲಕ್ಕೆ ಬಿಜೆಪಿ ಅತ್ಯಗತ್ಯವಾಗಿ ಬೇಕು. ಬಿಜೆಪಿ ಪಕ್ಷ ಈ ರಾಜ್ಯಕ್ಕೆ, ರಾಷ್ಟ್ರಕ್ಕೆ ಬೇಕು ಎಂದು ಅಭಿಪ್ರಾಯಪಟ್ಟರು. ಈ ದೇಶವನ್ನು ಕಳಂಕರಹಿತವಾಗಿ ಮೋದಿಯವರು ಆಳ್ತಿದ್ದು, ಮಂಡ್ಯದಲ್ಲಿ ಬಿಜೆಪಿ ಬೇರೂರಬೇಕು. ಮಂಡ್ಯದಲ್ಲಿ ಕಮಲ ಅರಳಿಸಬೇಕು. ನನ್ನನ್ನೂ ಬಿಜೆಪಿಯಿಂದ ಆಹ್ವಾನಿಸಲಾಗಿದೆ, ನಾನು ಬಿಜೆಪಿಗೆ ಹೋಗುತ್ತೇನೆ ಎಂದು ತಿಳಿಸಿದರು.
ನಾನು ಸಿದ್ದರಾಮಯ್ಯ, ಕುಮಾರಸ್ವಾಮಿ ಆಳ್ವಿಕೆ ನೋಡಿದವನು. ಜೆಡಿಎಸ್ ಸೇರಿದ್ದಾಗ ಹೆಚ್ಡಿ ದೇವೇಗೌಡರು, ಹೆಚ್ಡಿ ಕುಮಾರಸ್ವಾಮಿ ಬಳಸಿಕೊಂಡರು, ನಾನು ಬಿಜೆಪಿ ಸೇರುತ್ತೇನೆ ಎಂದು ಶಿವರಾಮೇಗೌಡ ಘೋಷಿಸಿದರು.ಸುಮಲತಾ ಅವರೂ ಬಿಜೆಪಿಗೆ ಬೆಂಬಲ ಕೊಟ್ಟಿದ್ದಾರೆ. ಮಂಡ್ಯದಲ್ಲಿ ನಾಗಮಂಗಲ ಸೇರಿ ಏಳೂ ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲಿಸ್ತೇವೆ. ಇನ್ನು ಇದೇ ವೇಳೆ ವೇದಿಕೆಯಲ್ಲಿ ಸಚಿವ ಮುನಿರತ್ನ ಮತ್ತು ಎಲ್ ಆರ್ ಶಿವರಾಮೇಗೌಡರನ್ನು ಸನ್ಮಾನಿಸಲಾಯಿತು.
ನಾನು ಬಿಜೆಪಿ ಪಕ್ಷ ಸೇರುವ ಪ್ರಕ್ರಿಯೆಗಳು ನಡೆಯುತ್ತಿವೆ. ಅಂತಿಮಗೊಳ್ಳದೆ ನಾನು ಬಿಜೆಪಿ ಸೇರಿದ್ದೇನೆ ಎಂದು ಹೇಳಲಾಗುವುದಿಲ್ಲ. ನಾನು ಬಿಜೆಪಿ ಸೇರುವುದಕ್ಕೆ ನಿರ್ಧರಿಸಿದ್ದೇನೆ. ಯಾವಾಗ ಎನ್ನುವುದು ನಿರ್ಧಾರವಾಗಬೇಕಾಗಿದೆ ಎಂದು ತಿಳಿಸಿದ್ದರು. ಈಗ ಬಿಜೆಪಿ ಸೇರ್ಪಡೆ ಬಗ್ಗೆ ಸ್ಪಷ್ಟಪಡಿಸಿದ್ದಾರೆ.