ಗಂಗಾವತಿ: ಅಂಜನಾದ್ರಿ ಪರ್ವತಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಭೇಟಿ ನೀಡಲಿದ್ದು, ವಿವಿಧ ಕಾಮಗಾರಿಗೆ ಭೂಮಿಪೂಜೆ ನೆರವೇರಿಸುವರು. ಈಗಾಗಲೇ ಅಂಜನಾದ್ರಿ ಬೆಟ್ಟದ ಅಭಿವೃದ್ಧಿಗೆ ಪ್ಲಾನ್ ಮಾಡಲಾಗಿದೆ.
ಅಂದಹಾಗೆ ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ 120 ಕೋಟಿ ರೂ ಅನುದಾನದಲ್ಲಿ ವಸತಿ ಸಮುಚ್ಚಯ, ರೋಪ್‌ವೇ ಸೇರಿ ಅಗತ್ಯ ಸೌಲಭ್ಯಗಳ ನಿರ್ಮಾಣದ ಕಾಮಗಾರಿಗಳು ಇಲ್ಲಿ ನಡೆಯಲಿವೆ. ಗಂಗಾವತಿಯ ತಾಲ್ಲೂಕು ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿರುವ ವಿವಿಧ ಇಲಾಖೆಯ ಫಲಾನುಭವಿಗಳ ಸಮಾವೇಶದಲ್ಲಿ ಭಾಗಿಯಾಗಿ ಹಕ್ಕುಪತ್ರ ವಿತರಣೆ ಮಾಡುವ ಸಿಎಂ ಅಲ್ಲಿಂದ ನೇರವಾಗಿ ಹೆಲಿಕಾಪ್ಟರ್ ಮೂಲಕ ತವರು ಕ್ಷೇತ್ರ ಶಿಗ್ಗಾಂವಿಗೆ ತೆರಳಲಿದ್ದಾರೆ.
2023-24ನೇ ಸಾಲಿನ ಮುಂಗಡಪತ್ರದಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ 100 ಕೋಟಿ ರೂಪಾಯಿ ಘೋಷಣೆ ಮಾಡಿದ್ದರು. ಅಗತ್ಯ ಮೂಲ ಸೌಕರ್ಯ ನಿರ್ಮಾಣ, ವಸತಿ ಸಮುಚ್ಚಯ ನಿರ್ಮಾಣ, ಸ್ನಾನಘಟ್ಟ, ಶೌಚಾಲಯ, ವಾಣಿಜ್ಯ ಸಂಕೀರ್ಣ ಸೇರಿದಂತೆ ನಾನಾ ಉದ್ದೇಶಿತ ಕಾಮಗಾರಿಗೆ ಸರ್ಕಾರ ಅನುದಾನ ಬಿಡುಗಡೆ ಮಾಡಿದೆ. ಗಂಗಾವತಿ ಸಾಯಿಬಾಬಾ ದೇವಸ್ಥಾನದವರೆಗೆ ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ ಸಿಕ್ಕಿದ್ದು, ಅಂಜನಾದ್ರಿ ಬೆಟ್ಟದಲ್ಲಿ ರೋಪ್ ವೇ ನಿರ್ಮಾಣ, ಥೀಮ್ ಪಾರ್ಕ್ ನಿರ್ಮಾಣದಂತಹ ಯೋಜನೆ ರೂಪಿಸಲಾಗಿದೆ.