ಬೆಂಗಳೂರು : ಡೀಲ್ ಅಥವಾ ಮ್ಯಾಚ್‌ಫಿಕ್ಸಿಂಗ್ ಎನ್ನುವುದು ನನ್ನ ಡಿಕ್ಷನರಿಯಲ್ಲೇ ಇಲ್ಲ ಎಂದು ಬಂಗಾರಪೇಟೆ ಬಿಜೆಪಿ ಪರಾಜಿತ ಅಭ್ಯರ್ಥಿ ಎಂ. ನಾರಾಯಣಸ್ವಾಮಿ ಹೇಳಿದರು.
ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ನಾನು ಜೆಡಿಎಸ್ ಪಕ್ಷದೊಂದಿಗೆ ಡೀಲ್ ಆಗಿದ್ದೇನೆ ಎಂದು ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಆರೋಪ ಮಾಡಿದ್ದು, ಅದನ್ನು ಸಾಬೀತು ಮಾಡಿದರೆ ಬಂಗಾರಪೇಟೆ ಕುವೆಂಪು ವೃತ್ತದಲ್ಲಿ ನೇಣು ಹಾಕಿಕೊಳ್ಳುತ್ತೇನೆ ಎಂದರು.
ನಾನು ಜೆಡಿಎಸ್‌ನವರೊಂದಿಗೆ ಶಾಮೀಲಾಗಿ ಯಾವುದೋ ಹೋಟೆಲ್‌ಗೆ ಹೋಗಿದ್ದೆ ಎಂದು ಆರೋಪಿಸಿದ್ದಲ್ಲದೇ ನಾನೆಂದೂ ಕೆಟ್ಟ ಕೆಲಸ ಮಾಡಿಲ್ಲ. ಕಾನೂನುತಜ್ಞರನ್ನು ಭೇಟಿಯಾಗಿದ್ದು, ಶಾಸಕರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಹೇಳಿದರು. ಸದ್ಯ ಕ್ಷೇತ್ರದ ಜನರ ದೃಷ್ಟಿಯಲ್ಲಿ ನಾನು ಖಳನಾಯಕನಾಗಿದ್ದೇನೆ. ಹಣ ಲಪಟಾಯಿಸಿದ್ದೇನೆ ಎಂದುಕೊಂಡಿದ್ದಾರೆ.
ಮನೆ ದೇವರ ಮೇಲೆ ಆಣೆ ನಾನು ಯಾರೊಂದಿಗೂ ಹೋಗಿಲ್ಲ, ಹಣ ಪಡೆದಿಲ್ಲ. ಅಪರಾಧಿ ಸ್ಥಾನದಲ್ಲಿರುವ ನಾನು ನಿರ್ದೋಷಿಯಾಗುವೆ, ಮುಂದಿನ ದಿನಗಳಲ್ಲಿ ಜನರು ಆಶೀರ್ವದಿಸಲಿದ್ದಾರೆ ಎಂದರು.