ಭೂಪಾಲ್: ಮಧ್ಯಪ್ರದೇಶದ ಬಿಜೆಪಿ ಸಂಸದರೊಬ್ಬರು ಬರಿಗೈನಿಂದ ಶೌಚಾಲಯವನ್ನು ಸ್ವಚ್ಛಗೊಳಿಸಿ ಭಾರೀ ಸುದ್ದಿಯಾಗಿದ್ದಾರೆ. ಮಧ್ಯ ಪ್ರದೇಶದ ರೇವಾ ಕ್ಷೇತ್ರದ ಸಂಸದ ಜನಾರ್ಧನ್ ಮಿಶ್ರಾ ಬಾಲಕಿಯರ ಹಾಸ್ಟೇಲ್ನ ಶೌಚಾಲಯವನ್ನು ಬರಿಗೈನಿಂದ ಸ್ವಚ್ಛಗೋಳಿಸಿದ್ದಾರೆ. ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಾರೀ ವೈರಲ್ ಆಗಿದೆ.
ಬಿಜೆಪಿ ಯುವ ಮೋರ್ಚಾ ಹಮ್ಮಿಕೊಂಡಿರುವ ಸ್ವಚ್ಛತೆ ಮತ್ತು ಸೇವೆಗೆ ಸಂಬಂಧಿಸಿದ ಯೋಜನೆಗಾಗಿ ಬರಿಗೈಲಿ ಬಾಲಕಿಯರ ಶೌಚಾಲಯವನ್ನು ಸ್ವಚ್ಛಗೊಳಿಸಿದ್ದಾಗಿ ಜನಾರ್ಧನ್ ಮಿಶ್ರಾ ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ದಿನವಾದ ಸೆಪ್ಟೆಂಬರ್ 17 ರಿಂದ ಬಿಜೆಪಿ ಸ್ವಚ್ಛತಾ ಅಭಿಯಾನವನ್ನು ಹಮ್ಮಿಕೊಂಡಿದೆ. ಈ ಅಭಿಯಾನದ ಅಂಗವಾಗಿ ಬಿಜೆಪಿ ಸಂಸದ ಜನಾರ್ಧನ್ ಮಿಶ್ರಾ ಹೀಗೆ ಶೌಚಾಲಯವನ್ನು ಬರಿಗೈಲಿ ಸ್ವಚ್ಛಗೊಳಿಸಿರುವುದಾಗಿ ಹೇಳಿಕೊಂಡಿದ್ದಾರೆ. ವರದಿಗಳ ಪ್ರಕಾರ ಬಿಜೆಪಿಯ ಯುವ ಘಟಕವು ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನವಾದ ಸೆಪ್ಟೆಂಬರ್ 17 ರಿಂದ ಮಹಾತ್ಮ ಗಾಂಧಿಯವರ ಜನ್ಮದಿನವಾದ ಅಕ್ಟೋಬರ್ 2 ರವರೆಗೆ ಸ್ವಚ್ಛತಾ ಅಭಿಯಾನವನ್ನು ನಡೆಸುತ್ತಿದೆ. ಈ ಉಪಕ್ರಮದ ಭಾಗವಾಗಿ ಸಂಸದ ಜನಾರ್ಧನ್ ಮಿಶ್ರಾ ಅವರು ಮರ ನೆಡುವ ಅಭಿಯಾನದಲ್ಲಿ ಭಾಗವಹಿಸಲು ಶಾಲೆಗೆ ಭೇಟಿ ನೀಡಿದ್ದರು. ರೇವಾ ಕ್ಷೇತ್ರದ ಸಂಸದರಾದ ಜನಾರ್ಧನ್ ಮಿಶ್ರಾ ತಮ್ಮ ಭೇಟಿಯ ವೇಳೆ ಬಾಲಕಿಯರ ಶಾಲೆಯಲ್ಲಿ ಶೌಚಾಲಯದ ಅನೈರ್ಮಲ್ಯವನ್ನು ಗಮನಿಸಿ ಅದನ್ನು ಬರಿಗೈಯಲ್ಲಿ ಸ್ವಚ್ಛಗೊಳಿಸಲು ನಿರ್ಧರಿಸಿದ್ದಾರೆ.