ನವದೆಹಲಿ: ಪಂಚರಾಜ್ಯಗಳ ಚುನಾವಣೆಯಲ್ಲಿ ಶತಾಯಗತಾಯ ಗೆಲುವು ಸಾಧಿಸಬೇಕೆಂಬ ಹಠಕ್ಕೆ ಬಿದ್ದಿರುವ ರಾಜಕೀಯ ಪಕ್ಷಗಳು ಪ್ರಚಾರದ ಭರಾಟೆಯಲ್ಲಿ ತೊಡಗಿಕೊಂಡಿವೆ. ಮಧ್ಯಪ್ರದೇಶದಲ್ಲಿ ಆಡಳಿತಾರೂಢ ಬಿಜೆಪಿ ಮತ್ತು ಪ್ರತಿಪಕ್ಷ ಕಾಂಗ್ರೆಸ್ ತಮ್ಮ ಪ್ರಣಾಳಿಕೆಗಳನ್ನು ಹೊರತಂದಿವೆ. ಚುನಾವಣೆಯ ಪೂರ್ವದಲ್ಲಿ ರಾಜ್ಯದಾದ್ಯಂತ ನೂರಾರು ರ‍್ಯಾಲಿಗಳನ್ನು ಆಯೋಜಿಸಿವೆ. ಬಿಜೆಪಿಯು ತನ್ನ ಪ್ರಮುಖ ನಾಯಕರ 634 ಪ್ರಚಾರ ಸಭೆಗಳನ್ನು ಆಯೋಜಿಸಿ ಇಂಡಿಯಾ ಕೂಟಕ್ಕೆ ಸೆಡ್ಡು ಹೊಡೆದಿದೆ.
ಅಲ್ಲದೆ ಇತ್ತ, ಕಾಂಗ್ರೆಸ್ ಕೂಡ 350 ರ‍್ಯಾಲಿಗಳನ್ನು ಪ್ರಚಾರದ ಸಂದರ್ಭದಲ್ಲಿ ಆಯೋಜಿಸಿದೆ. ಬಿಜೆಪಿಯ ಪ್ರಮುಖ ಭಾಷಣಕಾರರ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅಗ್ರಸ್ಥಾನದಲ್ಲಿದ್ದರೆ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೆಲ್ಲರೂ ನಂತರದ ಸ್ಥಾನದಲ್ಲಿದ್ದಾರೆ.
ಇದನ್ನೂ ಓದಿ : ಮ್ಯಾನ್ಮಾರ್ ನಾಗರಿಕರಿಗೆ, ಮಾಜಿ ಸೈನಿಕರಿಗೆ ತುರ್ತು ಪರಿಸ್ಥಿತಿಗಳಿಗೆ ಸಿದ್ಧರಾಗಲು ಆದೇಶ!
ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ಸಂಸದ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ಹಿರಿಯ ನಾಯಕರಾದ ಕೆಸಿ ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೆವಾಲಾ ರಾಜ್ಯದಲ್ಲಿ ಬಿರುಸಿನ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾರೆ.
ಹಾಲಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮತ್ತು ಕಾಂಗ್ರೆಸ್ ಪ್ರಚಾರ ಸಮಿತಿಯ ಪ್ರಮುಖರಾದ ಕಮಲ್ ನಾಥ್ ತಲಾ ನೂರಕ್ಕೂ ಹೆಚ್ಚು ಚುನಾವಣಾ ರ‍್ಯಾಲಿ ಉದ್ದೇಶಿಸಿ ಮಾತನಾಡಿದ್ದಾರೆ. ಪ್ರಧಾನಿ ಮೋದಿ ಅವರು 15 ಪ್ರಚಾರ ಸಭೆಗಳನ್ನು ನಡೆಸಿದ್ದಲ್ಲದೆ, ಡಬಲ್ ಎಂಜಿನ್ ಸರ್ಕಾರದ ಅನುಕೂಲಗಳನ್ನು ಎತ್ತಿ ತೋರಿಸಿದ್ದಾರೆ.
ಗೃಹ ಸಚಿವ ಅಮಿತ್ ಶಾ ಅವರು 21 ರ‍್ಯಾಲಿಗಳನ್ನು ಭೋಪಾಲ್, ಜಬಲ್ಪುರ್, ಖಜುರಾಹೊ ಮತ್ತು ಗ್ವಾಲಿಯರ್‌ನಲ್ಲಿ ನಡೆಸಿದ್ದಾರೆ. ಅಲ್ಲದೆ ಜೆಪಿ ನಡ್ಡಾ , 14 ಮತ್ತು ರಾಜನಾಥ್ ಸಿಂಗ್ 12 ಚುನಾವಣಾ ಪ್ರಚಾರ ಸಭೆಗಳನ್ನು ನಡೆಸಿದ್ದಾರೆ.
ಬಿಜೆಪಿ ಆಡಳಿತವಿರುವ ಉತ್ತರ ಪ್ರದೇಶ ಮತ್ತು ಅಸ್ಸಾಂನ ಮುಖ್ಯಮಂತ್ರಿಗಳಾದ ಯೋಗಿ ಆದಿತ್ಯನಾಥ್ ಮತ್ತು ಹಿಮಂತ ಬಿಸ್ವಾ ಶರ್ಮಾ ಅವರುಗಳು ಸಹ ಚುನಾವಣೆಯ ಪ್ರಚಾರ ಕಣಕ್ಕಿಳಿದಿದ್ದಾರೆ. ರಾಜ್ಯ ನಾಯಕರಲ್ಲಿ, ಶಿವರಾಜ್ ಸಿಂಗ್ ಚೌಹಾಣ್ ಅವರು 165 ರ‍್ಯಾಲಿಗಳನ್ನು ನಡೆಸಿದ್ದಾರೆ. ನಾನು ಹೆಲಿಕಾಪ್ಟರ್‌ನಿಂದ ಇಳಿಯುವಾಗ ಮತ್ತು ಹತ್ತುವಾಗ ಓಡುತ್ತಿದ್ದೆ. ಆದರೂ ನಾನು ಕೇವಲ 165 ರ‍್ಯಾಲಿಗಳನ್ನಷ್ಟೆ ನಡೆಸಿದ್ದೇನೆ ಎಂದು ಅವರು ಹೇಳಿದ್ದಾರೆ.
ಮಾಜಿ ಕಾಂಗ್ರೆಸ್ ನಾಯಕ ಮತ್ತು ಹಿಂದಿನ ರಾಜಮನೆತನದ ಸಿಂಧಿಯಾ ಕುಟುಂಬದ ಸದಸ್ಯರಾಗಿರುವ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ, ತಮ್ಮ ಕುಟುಂಬದ ಸ್ಥಳೀಯ ಪ್ರಭಾವವನ್ನು ಬಳಸಿಕೊಳ್ಳಲು 80 ಸಭೆಗಳನ್ನು ಆಯೋಜಿಸಿದ್ದಾರೆ. ಈ ಸಭೆಗಳಲ್ಲಿ ಅವರು ಕಾಂಗ್ರೆಸ್ ಪಕ್ಷವನ್ನು ಟೀಕಿಸಿದ್ದಲ್ಲದೆ ರಾಜ್ಯ ಮತ್ತು ದೇಶದಲ್ಲಿ ಬಿಜೆಪಿಯ ಸಾಧನೆಗಳನ್ನು ಎತ್ತಿ ಹೇಳಿದ್ದಾರೆ.
ಇದನ್ನೂ ಓದಿ : ನಾನು ಕಲಿತ ಈ ಶಾಲೆಯನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ: ವಿಜಯೇಂದ್ರ
ಕಾಂಗ್ರೆಸ್‌ನಲ್ಲಿ ಮಲ್ಲಿಕಾರ್ಜನ ಖರ್ಗೆ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ಸಚಿನ್ ಪೈಲಟ್ ರ‍್ಯಾಲಿಗಳನ್ನು ನಡೆಸಿದ ಜನಪ್ರಿಯ ನಾಯಕರಲ್ಲಿ ಸೇರಿದ್ದಾರೆ. ಕಾಂಗ್ರೆಸ್ ಮುಖ್ಯಸ್ಥರು ಒಂಬತ್ತು ಪ್ರಚಾರ ಸಭೆಗಳಲ್ಲಿ ಭಾಗಿಯಾಗಿದ್ದರೆ, ಗಾಂಧಿ ಸಹೋದರರು ತಲಾ 11 ಚುನಾವಣಾ ಸಭೆಗಳಲ್ಲಿ ಭಾಗವಹಿಸಿದ್ದಾರೆ.
ಮಧ್ಯಪ್ರದೇಶದ ದಾತಿಯಾದಲ್ಲಿ ಮಾತನಾಡಿದ ಪ್ರಿಯಾಂಕಾ ಗಾಂಧಿ, ನಾನು ಯುಪಿಯಲ್ಲಿ (ಸಿಂಧಿಯಾ) ಅವರೊಂದಿಗೆ ಕೆಲಸ ಮಾಡಿದ್ದೇನೆ, ವಾಸ್ತವವಾಗಿ, ಅವರ ಎತ್ತರ ಸ್ವಲ್ಪ ಚಿಕ್ಕದಾಗಿದೆ ಆದರೆ ಅಹಂಕಾರದಲ್ಲಿ ತುಂಬಾ ದೊಡ್ಡವರಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.
ಯಾವುದೇ ಕೆಲಸಗಾರನು ಅವರ ಬಳಿಗೆ ಹೋಗುತ್ತಿದ್ದನು, ನಾವು ಅವರನ್ನು ಮಹಾರಾಜ ಎಂದು ಕರೆಯಬೇಕು ಮತ್ತು ನಾವು ಅದನ್ನು ಹೇಳದಿದ್ದರೆ, ನಮ್ಮ ಸಮಸ್ಯೆಗಳ ಕಡೆಗೆ ಗಮನ ಕೊಡುವುದಿಲ್ಲ ಎಂದು ಟೀಕಿಸಿದ್ದಾರೆ.
ಅವನು ತನ್ನ ಕುಟುಂಬದ ಸಂಪ್ರದಾಯವನ್ನು ಚೆನ್ನಾಗಿ ಅನುಸರಿಸಿದ್ದಾನೆ. ಅನೇಕರು ದ್ರೋಹ ಮಾಡಿದ್ದಾರೆ, ಅವರಂತೆಯೇ ಇತರರು ದ್ರೋಹ ಮಾಡಿದ್ದಾರೆ. ಗ್ವಾಲಿಯರ್ ಮತ್ತು ಚಂಬಾದ ಸಾರ್ವಜನಿಕರು ಅವರು ಸರ್ಕಾರವನ್ನು ಪತನಗೊಳಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.