ಬೆಳಗಾವಿ : ಕಾಂಗ್ರೆಸ್ ಸರ್ಕಾರದಿಂದ ಕರ್ನಾಟದಲ್ಲಿ ಹಲವು ನೀರಾವರಿ ಯೋಜನೆಗಳು ಹಾಳಾಗಿವೆ ಎಂದು ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಆರೋಪಿಸಿದರು.
ಬೆಳಗಾವಿ ನಗರದಲ್ಲಿಂದು ಭಾರತೀಯ ಜನತಾ ಪಾರ್ಟಿ ಪಕ್ಷದ ಬೂತ್ ವಿಜಯ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಒಂದು ತಿಂಗಳಲ್ಲಿ ಮಹದಾಯಿ ಯೋಜನೆ ಕಾಮಗಾರಿ ಪ್ರಾರಂಭಿಸಿ ಒಂದು ವರ್ಷದಲ್ಲಿ ಕಾಮಗಾರಿ ಪೂರ್ಣ ಮಾಡದಿದ್ದರೆ ನನ್ನ ಹೆಸರು ಗೋವಿಂದ ಕಾರಜೋಳ ಎಂದು ಕರಿಯಬೇಡಿ ಎಂದರು. ಹಿಂದೆ ರಾಜ್ಯ ಮತ್ತು ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದರೂ ಮಹದಾಯಿ ಯೋಜನೆಗೆ ಚಾಲನೆ ನೀಡಲಿಲ್ಲ. ದಶಕಗಳ ಹೋರಾಟವಾದರು ಕಾಂಗ್ರೆಸ್ನವರು ಬಾಯಲ್ಲಿ ಕಡುಬು ಇಟ್ಟುಕೊಂಡಿದ್ದರಾ? ಯಾಕೆ ಯೋಜನೆಗೆ ಚಾಲನೆ ನೀಡಲಿಲ್ಲ ಎಂದು ಪ್ರಶ್ನಿಸಿದರು.
ಈಗ ಮಾಜಿ ಸಚಿವ ಎಚ್.ಕೆ. ಪಾಟೀಲ್ ಅವರು ಕೇಂದ್ರ ಸರ್ಕಾರ ಡಿಪಿಆರ್ ಮಾಡಿರುವುದು ಸುಳ್ಳು ಅಂತಾರೆ. ಆದೇಶ ಪ್ರತಿಯನ್ನು ನೋಡಿ ಎಂದು ಮಹದಾಯಿ ಯೋಜನೆ ಕೇಂದ್ರ ಸರ್ಕಾರದ ಆದೇಶ ಪ್ರತಿ ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದರು. ಹೆಚ್.ಕೆ.ಪಾಟೀಲ್ ಡೇಟ್ ಇಲ್ಲದ ಸುಳ್ಳು ಕಾಗದ ನೀಡಿದ್ದಾರೆ.
2022ರ ಡಿಸೆಂಬರ್ 29ರಂದು ಜಲಸಂಪನ್ಮೂಲ ಇಲಾಖೆ ನಿರ್ದೇಶಕರು ಸಹಿ ಮಾಡಿದ ಕೇಂದ್ರದ ಆದೇಶ ಇದೆ. ನಾವು ಮೋಸ ಮಾಡುವ ಪ್ರಶ್ನೆಯೇ ಇಲ್ಲ, ಕಾಂಗ್ರೆಸ್‌ನವರು ಮೋಸ ಮಾಡಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.