ಹುಬ್ಬಳ್ಳಿ: ದೇಶದಲ್ಲಿ ಭ್ರಷ್ಟಾಚಾರದ ಹೆಸರು ಬಂದಿದ್ದೆ ಕಾಂಗ್ರೆಸ್ ಪಕ್ಷದಿಂದ, ಕಾಂಗ್ರೆಸ್ ಭ್ರಷ್ಟಾಚಾರದ ಗಂಗೋತ್ರಿ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ತೆಂಗಿನಕಾಯಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಭ್ರಷ್ಟಾಚಾರದ ಆರೋಪವನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಪಕ್ಷ ಇಂದು ಬಿಜೆಪಿ ವಿರುದ್ಧ ಪ್ರತಿಭಟನೆ ಮಾಡಲು ಹೊರಟಿದೆ. ಆದರೆ ಅದೇ ಕಾಂಗ್ರೆಸ್ ಪಕ್ಷ ಹತ್ತಾರು ವರ್ಷಗಳಿಂದ ಭ್ರಷ್ಟಾಚಾರ ಮಾಡಿದೆ. ಗಾಳಿಯಲ್ಲಿ ಗುಂಡು ಹೊಡೆಯುವ ಕೆಲಸವನ್ನು ಕಾಂಗ್ರೆಸ್ ಮಾಡಿದೆ ಎಂದು ಕಿಡಿಕಾರಿದರು.
ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಯಾತ್ರೆ ಮೂಲಕ ಜನರಿಗೆ ವಿದ್ಯುತ್ ಉಚಿತವಾಗಿ ಕೊಡುತ್ತೇವೆ. ಮಹಿಳೆಯರಿಗೆ ಎರಡು ಸಾವಿರ ಕೊಡುತ್ತೇವೆ ಎಂದು ಹೇಳಿದ್ದಾರೆ. ಜೊತೆಗೆ ಆಶ್ವಾಸನೆಯನ್ನು ಈಡೇರಿಸದೇ ಹೋದಲ್ಲಿ ರಾಜಕೀಯ ನಿವೃತ್ತಿ ಪಡೆಯುವ ಮಾತು ಹೇಳಿದ್ದಾರೆ. ಇದು ಬಹಳ ದಿನ ಉಳಿದಿಲ್ಲ. ಮುಂದಿನ ಮೂರು ತಿಂಗಳಲ್ಲಿ ಸಿದ್ದರಾಮಯ್ಯ ರಾಜಕೀಯ ನಿವೃತ್ತಿ ಪಡೆಯುತ್ತಾರೆ. ಇದು ಸತ್ಯಕ್ಕೆ ಸಮೀಪವಾಗಿದೆ ಎಂದು ಹೇಳಿದರು.