ಹೊಸದಿಲ್ಲಿ: ನೂತನ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯೂಸಿ) ಬದಲಿಗೆ 47 ಸದಸ್ಯರ ಸ್ಟೀರಿಂಗ್ ಸಮಿತಿಯನ್ನು ರಚಿಸಿದ್ದಾರೆ. ಪಕ್ಷದ ಸಂವಿಧಾನದ ಪ್ರಕಾರ, ಸಿಡಬ್ಲ್ಯೂಸಿಯ 11 ಸದಸ್ಯರನ್ನು ನಾಮನಿರ್ದೇಶನ ಮಾಡಲಾಗುತ್ತದೆ. 12 ಮಂದಿ ಆಯ್ಕೆಯಾಗುತ್ತಾರೆ.
ಸಂಸತ್ತಿನಲ್ಲಿ ಪಕ್ಷದ ನಾಯಕರ ಜೊತೆಗೆ ಕಾಂಗ್ರೆಸ್ ಅಧ್ಯಕ್ಷರು ಸಹ ಕಾರ್ಯಕಾರಿ ಸಮಿತಿಯ ಸದಸ್ಯರಾಗಿರುತ್ತಾರೆ. ಆದರೆ, ಖರ್ಗೆ ಅವರ ಆಯ್ಕೆಯನ್ನು ಅಂಗೀಕರಿಸುವವರೆಗೆ, ಸ್ಟೀರಿಂಗ್ ಸಮಿತಿಯು ಸಿಡಬ್ಲ್ಯೂಸಿ ಆಗಿ ಕಾರ್ಯನಿರ್ವಹಿಸುತ್ತದೆ. ಮುಂದಿನ ವರ್ಷ ಮಾರ್ಚ್-ಏಪ್ರಿಲ್ನಲ್ಲಿ ನಡೆಯಲಿರುವ ಪಕ್ಷದ ಸರ್ವಸದಸ್ಯರ ಅಧಿವೇಶನದಲ್ಲಿ ಖರ್ಗೆ ಅವರ ಆಯ್ಕೆಯನ್ನು ಅಂಗೀಕರಿಸಲಾಗುವುದು. ಈ ಅಧಿವೇಶನದ ನಂತರ ಖರ್ಗೆ ಅವರು ನೂತನ ಸಿಡಬ್ಲ್ಯುಸಿಯನ್ನು ಮರುರಚಿಸಲಿದ್ದಾರೆ.
ಹೊಸದಾಗಿ ರಚಿಸಲಾದ ಸಮಿತಿಯಲ್ಲಿ ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸ್ಥಾನ ಪಡೆದಿದ್ದಾರೆ. ಮನಮೋಹನ್ ಸಿಂಗ್, ಎಕೆ ಆಂಟನಿ, ಜೈರಾಮ್ ರಮೇಶ್, ರಣದೀಪ್ ಸುರ್ಜೆವಾಲಾ, ಅಂಬಿಕಾ ಸೋನಿ, ಅಜಯ್ ಮಾಕನ್, ಹರೀಶ್ ರಾವತ್, ಅಭಿಷೇಕ್ ಮನು ಸಿಂಘ್ವಿ ಮತ್ತಿತರ ಪ್ರಮುಖ ನಾಯಕರು ಸಮಿತಿಯ ಭಾಗವಾಗಿದ್ದಾರೆ.
ವಿಶೇಷವೆಂದರೆ, ಕಾಂಗ್ರೆಸ್ ಅಧ್ಯಕ್ಷ ಚುನಾವಣೆಯಲ್ಲಿ ಖರ್ಗೆ ವಿರುದ್ಧ ಸ್ಪರ್ಧಿಸಿದ್ದ ಶಶಿ ತರೂರ್ ಅವರಿಗೆ ಸಂಚಾಲನಾ ಸಮಿತಿಯಲ್ಲಿ ಸ್ಥಾನ ಸಿಗಲಿಲ್ಲ. ಕಾರ್ಯಕಾರಿ ಸಮಿತಿಯ ಎಲ್ಲಾ ಸದಸ್ಯರು, ಪ್ರಧಾನ ಕಾರ್ಯದರ್ಶಿಗಳು ಮತ್ತು ಉಸ್ತುವಾರಿಗಳು ತಮ್ಮ ರಾಜೀನಾಮೆಯನ್ನು ಸಲ್ಲಿಸಿದ್ದು, ಹೊಸ ಮುಖ್ಯಸ್ಥರು ತಮ್ಮ ತಂಡವನ್ನು ಸ್ಥಾಪಿಸಲು ಅನುವು ಮಾಡಿಕೊಟ್ಟಿದ್ದರು.