ಕಲಬುರಗಿ: ಕಾಂಗ್ರೆಸ್‌ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆಯವರಿಗೆ ಎಐಸಿಸಿ ಅಧ್ಯಕ್ಷ ಸ್ಥಾನ ನೀಡುವ ಮೂಲಕ ಅವರನ್ನು ಹರಕೆಯ ಕುರಿ ಮಾಡಿದ್ದಾರೆ ಎಂದು ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಲೇವಡಿ ಮಾಡಿದ್ದಾರೆ.
ವಿರಾಟ್ ಸಮಾವೇಶದಲ್ಲಿ ಮಾತನಾಡಿ, 1947ರಲ್ಲಿ ಅಖಂಡ ಭಾರತವನ್ನು ತುಂಡು ಮಾಡಿದ್ದು ಇದೇ ಕಾಂಗ್ರೆಸ್‌ನ ನೆಹರೂ. ಇಂದು ರಾಹುಲ್ ಬಾಬಾ ಭಾರತ್ ಜೋಡೋ ಯಾತ್ರೆ ಮಾಡುತ್ತಿದ್ದಾರೆ. ತುಕಡೇ ಮಾಡಿದವರಿಂದಲೇ ಜೋಡೋ ಅಭಿಯಾನ ನಡೆದಿದೆ ಎಂದರು. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರಿಂದ ಕಾಂಗ್ರೆಸ್ ಉಳಿಸಲು ಆಗುತ್ತಿಲ್ಲ. ಹೀಗಾಗಿ ಕಾಂಗ್ರೆಸ್ ಮುಳುಗುವ ಸಂದರ್ಭದಲ್ಲಿ ಮುಳುಗುವ ಹಡಗಿಗೆ ನಾವಿಕನಾಗಿ ಮಲ್ಲಿಕಾರ್ಜುನ ಖರ್ಗೆಯವರನ್ನು ಕಾಂಗ್ರೆಸ್ ನೇಮಕ ಮಾಡುವ ಮೂಲಕ ಅವರನ್ನು ಬಲಿ ಕಾ ಬಕ್ರಾ ಮಾಡಿದ್ದಾರೆ. ಬಕ್ರೀದ್ ಮೇ ಬಚೇಂಗೆ ತೋ ಮೊಹರಂ ಮೇ ನಾಚೇಂಗೆ ಎಂದು ಖುದ್ದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ದುರ್ದೈವದ ಸಂಗತಿ ಎಂದರೆ, ಅವರೇ ಹರಕೆಯ ಕುರಿಯಾಗಿದ್ದನ್ನು ಒಪ್ಪಿಕೊಂಡಿದ್ದಾರೆ ಎಂದು ಲೇವಡಿ ಮಾಡಿದರು. ಕೇಂದ್ರದಲ್ಲಿ ಮೋದಿ ನೇತೃತ್ವದಲ್ಲಿ ಭಾರತ ವಿಶ್ವಮಟ್ಟದಲ್ಲಿ ಗುರುತಿಸಿಕೊಂಡಿದೆ. ಇಡೀ ವಿಶ್ವವೇ ಮೋದಿಯವರ ಆಡಳಿತ ವೈಖರಿಯನ್ನು ಮೆಚ್ಚಿಕೊಂಡು, ಗುಣಗಾನ ಮಾಡುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು.