ಬೆಂಗಳೂರು: ಬಸವಕಲ್ಯಾಣ ಕ್ಷೇತ್ರದ ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಸಮ್ಮುಖದಲ್ಲಿ ಜೆಡಿಎಸ್ ಸೇರ್ಪಡೆ ಆಗಿದ್ದಾರೆ. ಕುಮಾರಸ್ವಾಮಿ ನಿವಾಸದಲ್ಲಿ ಪಕ್ಷ ಸೇರ್ಪಡೆಗೊಂಡು ನಂತರ ಮಾತನಾಡಿದರು.
ಶುಭ ಸಮಯ ಇದ್ದ ಕಾರಣಕ್ಕೆ ಮಾಜಿ ಸಿಎಂ ನಿವಾಸಕ್ಕೆ ತೆರಳಿ ಪಕ್ಷಕ್ಕೆ ಸೇರ್ಪಡೆ ಆಗಿದ್ದೇನೆ ಎಂದು ಹೇಳಿದರು. ಹೆಚ್.ಡಿ ಕುಮಾರಸ್ವಾಮಿ ಮಾತನಾಡಿ, ಮಲ್ಲಿಕಾರ್ಜುನ ಖೂಬಾ ಮೊದಲು ಜೆಡಿಎಸ್ ನಲ್ಲೇ ಇದ್ದವರು, ಕಾರಣಾಂತರಗಳಿಂದ ಪಕ್ಷ ಬಿಟ್ಟಿದ್ದರು. ಈಗ ಮರಳಿ ತಮ್ಮ ಮನೆಗೆ ಬಂದಿದ್ದಾರೆ ಎಂದು ಹೇಳಿದರು.
ಚುನಾವಣೆ ಹಿನ್ನಲೆ ಇದ್ದ ಪಕ್ಷ ಬಿಟ್ಟು ಬೇರೆ ಪಕ್ಷ ಸೇರೋದು ಸಹಜ, ಈಗಾಗಲೇ ಗುಬ್ಬಿ ಕ್ಷೇತ್ರದ ಜೆಡಿಎಸ್ ಶಾಸಕ ಶ್ರೀನಿವಾಸ್ ರಾಜೀನಾಮೆ ನೀಡಿದ್ದು, ನಿನ್ನೆ ಅಧಿಕೃತವಾಗಿ ಕಾಂಗ್ರೆಸ್ ಸೇರಿದ್ದಾರೆ. ಇಂದು ಇಬ್ಬರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಅರಸಿಕೆರೆ ಜೆಡಿಎಸ್ ಶಾಸಕ ಶಿವಲಿಂಗೇಗೌಡ ಸಹ ರಾಜೀನಾಮೆ ನೀಡುವ ಯೋಚನೆಯಲ್ಲಿದ್ದಾರೆ.
ಈಗಾಗಲೇ ಕಾಂಗ್ರೆಸ್ ಸೇರುವುದಾಗಿ ಬಹಿರಂಗವಾಗಿ ಘೋಷಣೆ ಮಾಡಿದ್ದಾರೆ. ಈ ಹಿಂದೆ ಜೆಡಿಎಸ್ ನಿಂದ ಎರಡು ಬಾರಿ ಬಸವಕಲ್ಯಾಣ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿದ್ದರು. ಕಳೆದ ವಿಧಾನಸಭಾ ಚುನಾವಣೆ ವೇಳೆ ಬಿಜೆಪಿ ಸೇರಿದ್ದರು. ಇದೀಗ ಮತ್ತೆ ಜೆಡಿಎಸ್ ಪಕ್ಷಕ್ಕೆ ಮರು ಸೇರ್ಪಡೆಯಾಗಿದ್ದಾರೆ. ಬಿಜೆಪಿ ಶಾಸಕ ಗೋಪಾಲ ಕೃಷ್ಣ ಸಹ ಅಧಿಕೃತ ತಮ್ಮ ಶಾಸಕ ಸ್ಥಾನ ರಾಜೀನಾಮೆ ನೀಡಿದ್ದಾರೆ.