ಮಂಡ್ಯ : ತಮಿಳುನಾಡಿಗೆ ಕೆಆರ್‌ಎಸ್ ಜಲಾಶಯದಿಂದ ನೀರು ಬಿಡುಗಡೆ ಮಾಡುತ್ತಿರುವುದರಿಂದ ಇಂದೂ ಸಹ ರೈತ ಸಂಘದಿಂದ ಪ್ರತಿಭಟನೆ ನಡೆಯುತ್ತಿದೆ. ಜಿಲ್ಲೆಯ ಮದ್ದೂರು ತಾಲೂಕಿನ ಬೆಸಗರಹಳ್ಳಿ ಗ್ರಾಮವನ್ನು ಸಂಪೂರ್ಣ ಬಂದ್ ಮಾಡಿ ರೈತರು ತಮ್ಮ ಹೋರಾಟವನ್ನು ತೀವ್ರಗೊಳಿಸಿದ್ದಾರೆ.
ರೈತ ಸಂಘದ ಇಂದಿನ ಬಂದ್‌ಗೆ ವರ್ತಕರೂ ಸಹ ಬೆಂಬಲ ವ್ಯಕ್ತಪಡಿಸಿದ್ದಲ್ಲದೆ, ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ರಾಜ್ಯ ಸರ್ಕಾರದ ನಡೆಯನ್ನು ಖಂಡಿಸಿದ್ದಾರೆ.
ಇದನ್ನೂ ಓದಿ : ‘ಬಿಜೆಪಿ-ಜೆಡಿಎಸ್ ಮೈತ್ರಿಗೆ ನಮ್ಮ ವಿರೋಧವಿಲ್ಲ; ಐ ವಿಶ್ ದೆಮ್ ಆಲ್ ದಿ ಬೆಸ್ಟ್’
ತಿರುಪತಿ ನಾಮ ಹಾಕುವ ಚಳುವಳಿ ಮೂಲಕ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಭತ್ತ, ರಾಗಿಗೆ ನೀರಿಲ್ವಲ್ಲೋ ಗೋವಿಂದ.. ಕುಡಿಯೋಕು ನೀರಿಲ್ವಲ್ಲ ಗೋವಿಂದ.. ಗೋವಿಂದ.. ಎಂದು ಲಾಟಿ, ಗುಂಡು, ಜೈಲಿಗೆ ನಾವು ಎದುರುವುದಿಲ್ಲ ಎಂಬ ಘೋಷಣೆ ಕೂಗಿ ಡಿಸಿಎಂ ಡಿಕೆಶಿ, ಸಂಸದೆ ಸುಮಲತಾ ವಿರುದ್ದ ರೈತರು ಕೆಂಡ ಕಾರಿದ್ದಾರೆ.


ರೈತರ ಬಗ್ಗೆ ಅವಹೇಳನಕಾರಿ ನೀಡಿರುವ ಸಚಿವ ಶಿವಾನಂದ ಪಾಟೀಲ್ ಹೇಳಿಕೆಯನ್ನು ಖಂಡಿಸಿರುವ ಹೋರಾಟಗಾರರು, ಸಚಿವರ ವಿರುದ್ಧ ಪೋಸ್ಟರ್ ಹಿಡಿದು 420 ಡಿಕೆಶಿಗೆ ಧಿಕ್ಕಾರ ಧಿಕ್ಕಾರ. 420 ರಾಜ್ಯ ಸರ್ಕಾರ ಎಂದು ಘೋಷಣೆ ಕೂಗಿ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಲ್ಲದೆ, ಸಚಿವ ಶಿವಾನಂದ ಪಾಟೀಲ್ ಪ್ರತಿಕೃತಿ ದಹಿಸಿ ಬಾಯಿ ಬಡಿದುಕೊಂಡು ಆಕ್ರೋಶದ ಕಿಚ್ಚನ್ನು ಹೊರಹಾಕಿದ್ದಾರೆ. ಸಚಿವ ಪಾಟೀಲ್ ಹೇಳಿಕೆಯನ್ನು ಖಾರವಾಗಿಯೇ ಅಣಕಿಸಿರುವ ರೈತ ಹೋರಾಟಗಾರರು ಗ್ರಾಮದ ಬೀದಿ ಬೀದಿಗಳಲ್ಲಿ ಭಿಕ್ಷಾ ಪಾತ್ರೆಹಿಡಿದು ಭಿಕ್ಷೆ ಬೇಡಿದ್ದಾರೆ. ಸಚಿವ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡರೇ ನಾವೇ ಪರಿಹಾರ ಕೊಡುತ್ತೇವೆ ಎಂದು ಸಕ್ಕರೆ ಮಂತ್ರಿಗೆಯೇ ಸೆಡ್ಡು ಹೊಡೆದಿದ್ದಾರೆ.
ಕೆ.ಆರ್.ಎಸ್ ಇಂದಿನ ನೀರಿನ ಸ್ಥಿತಿಗತಿ ಹೇಗಿದೆ..?
- ಗರಿಷ್ಠ ಮಟ್ಟ 124.80 ಅಡಿ
- ಇಂದಿನ ಮಟ್ಟ 98.06 ಅಡಿ
- ಒಳಹರಿವು 2873 ಕ್ಯೂಸೆಕ್
- ಹೊರಹರಿವು 1737 ಹೊರ ಹರಿವು (ನಾಲೆಗಳಿಗೆ)
- ಗರಿಷ್ಠ ಸಂಗ್ರಹ ಸಾಮರ್ಥ್ಯ 49.452 ಟಿಎಂಸಿ
- ಇಂದು ಸಂಗ್ರಹವಿರುವ ನೀರು 21.327 ಟಿಎಂಸಿ.
- 21 ಟಿಎಂಸಿಯಲ್ಲಿ 5 ಟಿಎಂಸಿ ಡೆಡ್ ಸ್ಟೋರೇಜ್.
ಬಳಕೆಗೆ ಉಳಿಯುವುದು ಕೇವಲ 16 ಟಿಎಂಸಿ ನೀರು ಮಾತ್ರ, ಆದರೆ ಡಿಸೆಂಬರ್ ವರೆಗೆ ಕುಡಿಯುವ ನೀರಿಗೆ ಸಮಸ್ಯೆ ಆಗುವ ಸಾಧ್ಯತೆಗಳಿಲ್ಲ. ಜನವರಿಯಿಂದ ಕಾವೇರಿ ನೀರಿಗಾಗಿ ಹಾಹಾಕಾರ ಪ್ರಾರಂಭವಾಗುವುದನ್ನು ತಳ್ಳಿ ಹಾಕುವಂತಿಲ್ಲ.
ಇದನ್ನೂ ಓದಿ : ಇಬ್ಬರು ಅಸಹಾಯಕರು ಒಂದಾಗ್ತಿದ್ದಾರೆ : ಬಿಜೆಪಿ-ಜೆಡಿಎಸ್ ಮೈತ್ರಿಗೆ ಶೆಟ್ಟರ್ ವ್ಯಂಗ್ಯ
ಸರ್ಕಾರದ ವಿರುದ್ಧ ಪೊರಕೆ ಚಳುವಳಿ..
ಕಾಲಕ್ಕೆ ಸರಿಯಾಗಿ ಮಳೆಯಾಗದೆ ಕುಡಿಯುವ ನೀರಿಗೂ ಸಂಕಷ್ಟದಲ್ಲಿರುವ ಪರಿಸ್ಥಿತಿಯಲ್ಲಿ ತಮಿಳುನಾಡಿಗೆ ಬೆಳೆ ಬೆಳೆಯಲು ನೀರು ಬಿಡುತ್ತಿರುವ ರಾಜ್ಯ ಸರ್ಕಾರದ ವಿರುದ್ದ ಕನ್ನಡಪರ ಸಂಘಟನೆಗಳ ಒಕ್ಕೂಟದ ಮುಖಂಡರು ಪೊರಕೆ ಚಳುವಳಿ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಪ್ರತಿ ನಿತ್ಯ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸುವ ಮೂಲಕ ಸರ್ಕಾರದ ಗಮನ ಸೆಳೆಯಲು ಯತ್ನಿಸುತ್ತಿರುವ ಕನ್ನಡಪರ ಸಂಘಟನೆಗಳ ಒಕ್ಕೂಟದ ಮುಖಂಡರು. ಇಂದು ಚಾಮರಾಜೇಶ್ವರ ದೇವಸ್ಥಾನದ ಆವರಣದಿಂದ ಭುವನೇಶ್ವರಿ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ್ದಾರೆ.


ಕೈಯಲ್ಲಿ ಕಸ ಗುಡಿಸುವ ಪೊರಕೆ ಹಿಡಿದು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ದ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದ್ದಾರೆ.
ತಣ್ಣಗಾಗದ ಕಾವೇರಿ ಕಿಚ್ಚು ಅನಿರ್ಧಿಷ್ಟಾವಧಿ ಹೋರಾಟ ಆರಂಭಿಸಿದ ದರ್ಶನ್ ಪುಟ್ಟಣ್ಣಯ್ಯ..
ಕೆ.ಆರ್.ಎಸ್ ಡ್ಯಾಂನಿಂದ ತಮಿಳುನಾಡಿಗೆ ಹರಿಸುತ್ತಿರುವ ನೀರನ್ನು ನಿಲ್ಲಿಸುವಂತೆ ಅಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ಹೋರಾಟ ಮುಂದುವರಿದಿದೆ. ಶ್ರೀರಂಗಪಟ್ಟಣದಲ್ಲಿ ಅನಿರ್ಧಿಷ್ಟಾಧಿ ಪ್ರತಿಭಟನೆ ಆರಂಭಿಸಿರುವ ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣಯ್ಯ, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಮುಂದಿನ ಸಭೆಯವರೆಗೂ ಪ್ರತಿಭಟನೆಗೆ ನಿರ್ಧಾರ ಮಾಡಿದ್ದಾರೆ.
ಕೆಆರ್.ಎಸ್‌ಗಿಂದು ಬಿಜೆಪಿ ನಿಯೋಗ ಭೇಟಿ..
ಕೆ.ಆರ್.ಎಸ್ ಡ್ಯಾಂನಿಂದ ತಮಿಳುನಾಡಿಗೆ ನೀರು ಬಿಡುಗಡೆ ಹಿನ್ನೆಲೆ ಜಲಾಶಯದ ವಾಸ್ತವ ಸ್ಥಿತಿ ಅರಿಯುವ ಮೂಲಕ ಮುಂದಿನ ಹೋರಾಟದ ರೂಪುರೇಷೆಗಳನ್ನು ಸಿದ್ದಪಡಿಸುವ ಸಲುವಾಗಿ ಇಂದು ಬಿಜೆಪಿ ನಿಯೋಗ ಕೆಆರ್‌ಎಸ್‌ಗೆ ಭೇಟಿ ನೀಡಲಿದೆ.
ಬಿಜೆಪಿ ನಾಯಕರ ಭೇಟಿಯ ನಿಮಿತ್ತ ಡ್ಯಾಂನ ಮುಖ್ಯದ್ವಾರದಲ್ಲಿ ಹಾಗೂ ಸುತ್ತ-ಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿ, ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ನೇತೃತ್ವದಲ್ಲಿ ಕೆ.ಎಸ್.ಆರ್.ಪಿ ಸೇರದಂತೆ ಎರಡು ನೂರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ.


ಮಧ್ಯಾಹ್ನ 3 ಗಂಟೆಗೆ ಡ್ಯಾಂಗೆ ಭೇಟಿ ನೀಡಲಿರುವ ಬಿಜೆಪಿ ನಿಯೋಗದಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಚಿವರಾದ ಗೋವಿಂದ ಕಾರಜೋಳ, ಸಂಸದರಾದ ಸುಮಲತಾ ಅಂಬರೀಷ್, ಪ್ರತಾಪ್ ಸಿಎಂ ಸೇರಿದಂತೆ ಹಲವು ಬಿಜೆಪಿ ನಾಯಕರು ಇರಲಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.