ಮಂಡ್ಯ: ಸಕ್ಕರೆ ನಾಡು ಮಂಡ್ಯ ಗೆ ಶುಕ್ರವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮಿಸುತ್ತಿರುವ ಹಿನ್ನೆಲೆ ಮಂಡ್ಯ ನಗರದಲ್ಲಿ ಬ್ಯಾನರ್ ಗಳು ಫ್ಲೆಕ್ಸ್ ಗಳು ರಾರಾಜಿಸ್ತಿವೆ. ಅಮಿತ್ ಶಾರನ್ನು ಸ್ವಾಗತಿಸಿ ಹಾಕಿದ ಫ್ಲೆಕ್ಸ್ ನಲ್ಲಿ ಸ್ವಾಭಿಮಾನಿ ಸಂಸದೆ ಸುಮಲತಾ ಅಂಬರೀಶ್ ಫೋಟೋ ರಾರಾಜಿಸುತ್ತಿದೆ. ಇದರ ಜೊತೆಗೆ ಶೀಘ್ರದಲ್ಲೇ ಸುಮಲತಾ ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಸಂಸದೆ ಸುಮಲತಾ ಅವರ ಆಪ್ತ ಇಂಡವಾಳು ಸಚ್ಚಿದಾನಂದ ಈಗಾಗಲೇ ಬಿಜೆಪಿ ಸೇರಿದ್ದಾರೆ. ಸುಮಲತಾ ಅನುಮತಿ ಪಡೆದೆ ಬಿಜೆಪಿ ಸೇರಿರುವುದಾಗಿ ಸಚ್ಚಿದಾನಂದ ಹೇಳಿದ್ದರು. ಇದೀಗ ಆಪ್ತ ಕೋರಿರುವ ಫ್ಲೆಕ್ಸ್ನಲ್ಲಿ ಸುಮಲತಾ ಅವರ ಫೋಟೋ ರಾರಾಜಿಸುತ್ತಿದೆ. ಕರ್ನಾಟಕ ವಿಧಾನಸಭೆ ಚುನಾವಣೆಗೆ 4 ತಿಂಗಳು ಬಾಕಿ ಇರುವಾಗಲೇ ಬಿಜೆಪಿಯ ಕೇಂದ್ರ ನಾಯಕರು ರಾಜ್ಯ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದಿನಿಂದ ಮೂರು ದಿನಗಳ ಕಾಲ ರಾಜ್ಯ ಪ್ರವಾಸ ಕೈಗೊಂಡಿದ್ದಾರೆ. ಇಂದು ಬೆಂಗಳೂರಿಗೆ ಆಗಮಿಸುತ್ತಿರುವ ಹಿನ್ನೆಲೆ ಅಮಿತ್ ಶಾ ಸ್ವಾಗತಕ್ಕೆ ಸಿದ್ಧತೆ ನಡೆಯುತ್ತಿವೆ.
ಬಿಜೆಪಿ ಫ್ಲೆಕ್ಸ್ಗಳಲ್ಲಿ ಸಂಸದೆ ಸುಮಲತಾ ಅಂಬರೀಶ್ ಫೋಟೋ ಹಾಕಿರುವ ಫ್ಲೆಕ್ಸ್ ಅಚ್ಚರಿಗೆ ಕಾರಣವಾಗಿದೆ. ನಾಳೆ ನಡೆಯುವ ಕಾರ್ಯಕ್ರಮದಲ್ಲಿ ಅಮಿತ್ ಶಾ ಅವರ ಜೊತೆ ಸಂಸದೆ ಸುಮಲತಾ ಅಂಬರೀಶ್ ವೇದಿಕೆ ಹಂಚಿಕೊಳ್ತಾರಾ ಅನ್ನೋ ಚರ್ಚೆಗಳು ಶುರುವಾಗಿವೆ. ಅಂದಹಾಗೆ ಸುಮಲತಾ ಅಂಬರೀಶ್ ಅವರ ಅನುಮತಿ ಪಡೆದು ಫೋಟೋ ಬಳಸಲಾಗಿದೆ ಎಂಬ ಮಾಹಿತಿ ದೊರೆತಿದೆ.