ಮಂಡ್ಯ: ಮಂಡ್ಯಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮನ ಹಿನ್ನೆಲೆಯಲ್ಲಿ ಅದ್ಧೂರಿ ಸ್ವಾಗತಕ್ಕೆ ಮುಂದಾಗಿದ್ದಾರೆ. ಮೈಸೂರು ಪೇಟ ತೊಡಿಸಿ, ಏಕತಾ ಪ್ರತಿಮೆ ಉಡುಗೊರೆ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
ಬೆಳ್ಳಿಯಲ್ಲಿ ತಯಾರಾಗಿರುವ ಸರ್ದಾರ್ ವಲ್ಲಭಭಾಯಿ ಪಟೇಲ್ ಪಟೇಲರ ಪ್ರತಿಮೆಯನ್ನು ನೀಡಲಾಗುತ್ತದೆ. ಅಪ್ಪಟ ರೇಷ್ಮೆ ಬಳಸಿ ತಯಾರಿಸಲಾಗಿರುವ ಮೈಸೂರು ಪೇಟವು ಮಹಾರಾಜರು ತೊಡುವ ರೀತಿ ಕಂಗೊಳಿಸುತ್ತಿದೆ ಎಂದು ತಿಳಿದುಬಂದಿದೆ.
ಕಾರ್ಯಕ್ರಮದ ವೇದಿಕೆಗೆ ಎಲ್ಲರಿಗೂ ಪಾಸ್ ವ್ಯವಸ್ಥೆ ಮಾಡಲಾಗಿದೆ. ಪಾಸ್ ಪರಿಶೀಲನೆ ಮಾಡಿ ನಾಗರೀಕರನ್ನು ಪೊಲೀಸರು ಒಳಬಿಡುತ್ತಿದ್ದು, ಆವರಣದ ಪ್ರವೇಶಿಸುತ್ತಿದ್ದಂತೆ ಎಲ್ಲರಿಗೂ ಸ್ಯಾನಿಟೈಸರ್, ಥರ್ಮಲ್ ಸ್ಕ್ರೀನಿಂಗ್ ಮಾಡಿ ಮಾಸ್ಕ್ ವಿತರಣೆ ಮಾಡಲಾಗುತ್ತಿದೆ.
ರಾಜ್ಯದಲ್ಲಿ ಹಳೇ ಮೈಸೂರು ಭಾಗದಲ್ಲಿ ಕೇಸರಿ ಪಡೆಯ ಕಮಲವನ್ನು ಅರಳಿಸುವ ಸಂಕಲ್ಪದೊಂದಿಗೆ ಆಗಮಿಸುತ್ತಿರುವ ಕೇಂದ್ರ ಸಚಿವ ಅಮಿತ್ ಶಾ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಗೆಜ್ಜಲಗೆರೆಯಲ್ಲಿ 47 ಎಕರೆ ವಿಸ್ತೀರ್ಣದಲ್ಲಿ ಸುಮಾರು 260.9 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಮೆಗಾ ಡೈರಿ ಹಾಲು ಉತ್ಪಾದಕ ಘಟಕವನ್ನು ಉದ್ಘಾಟನೆ ಮಾಡಲಿದ್ದಾರೆ.
ನಂತರ ಮಂಡ್ಯ ನಗರದ ಕಾಲೇಜು ಆವರಣದಲ್ಲಿ ನಡೆಯುವ ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.ಮದ್ದೂರಿನಿಂದ ಮಂಡ್ಯದವರೆಗೂ ಎಲ್ಲೆಲ್ಲೂ ಕೇಸರಿ ಬಾವುಟ ಮತ್ತು ಬಿಜೆಪಿ ಧ್ವಜಗಳು ಹಾರಾಡುತ್ತಿವೆ. ಮೊದಲನೆಯದಾಗಿ ಬೆಳಗ್ಗೆ 11.30ಕ್ಕೆ ಅಮಿತ್ ಶಾ ಆಗಮಿಸಿ ಮೆಗಾ ಡೈರಿ ಉದ್ಘಾಟನೆ ಮಾಡಲಿದ್ದಾರೆ.