ಅಗರ್ತಲಾ: ತ್ರಿಪುರಾ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯ ಗಳಿಸಿದ್ದು, ಮುಖ್ಯಮಂತ್ರಿಯಾಗಿ ಮಾಣಿಕ್ ಸಹಾ ಎರಡನೇ ಬಾರಿಗೆ ಅಧಿಕಾರ ಸ್ವೀಕರಿಸಿದ್ದಾರೆ.
ಅಗರ್ತಲಾದ ಸ್ವಾಮಿ ವಿವೇಕಾನಂದ ಮೈದಾನದಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಸಮ್ಮುಖದಲ್ಲಿ ಪ್ರತಿಜ್ಞಾವಿಧಿ ಪಡೆದರು. ಸಿಎಂ ಜೊತೆಗೆ 8 ಮಂದಿ ಶಾಸಕರು ಸಚಿವರಾಗಿ ಪ್ರಮಾಣ ವಚನ ಪಡೆದರು. ಚುನಾವಣೆಗೂ ಮೊದಲು ಮುಖ್ಯಮಂತ್ರಿ ಅಭ್ಯರ್ಥಿ ಯಾರೆಂದು ಪಕ್ಷ ಅಧಿಕೃತವಾಗಿ ಘೋಷಣೆ ಮಾಡಿರಲಿಲ್ಲ. ಕೇಂದ್ರ ಗೃಹ ಸಚಿವ ಅಮಿತ್ ಶಾ ಮೋದಿ- ಮಾಣಿಕ್ ಸಹಾ ಸರ್ಕಾರವನ್ನು ಗೆಲ್ಲಿಸಿ ಎಂದು ಪ್ರಚಾರ ನಡೆಸಿದ್ದರು.
ಅಲ್ಪಾವಧಿಗೆ ರಾಜ್ಯಸಭೆ ಸದಸ್ಯರಾಗಿದ್ದ ಮಾಣಿಕ್ ಸಹಾ, ಬಿಪ್ಲಬ್ ದೇಬ್ ಅವರು ರಾಜೀನಾಮೆ ನೀಡಿದ ಬಳಿಕ 2022ರಲ್ಲಿ ಅಗರ್ತಲಾ ಬಳಿಯ ಟೌನ್ ಬಾರ್ಡೋವಾಲಿ ಕ್ಷೇತ್ರದಿಂದ ಉಪಚುನಾವಣೆಗೆ ಸ್ಪರ್ಧಿಸಿ ಜಯಿಸಿ ವಿಧಾನಸಭೆ ಪ್ರವೇಶಿಸಿದರು. ಚುನಾವಣೆಯಲ್ಲಿ 60 ಸ್ಥಾನಗಳ ಪೈಕಿ ಬಿಜೆಪಿ 32 ಕ್ಷೇತ್ರ ಗೆದ್ದು ಸುಮಾರು ಶೇ 39 ಮತಗಳನ್ನು ಗಳಿಸಿದೆ.
ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸಲು ಕೇರಳದಲ್ಲಿ ಪ್ರತಿಸ್ಪರ್ಧಿಗಳಾಗಿದ್ದ ಸಿಪಿಐ(ಎಂ) ಮತ್ತು ಕಾಂಗ್ರೆಸ್ ತ್ರಿಪುರಾದಲ್ಲಿ ಮೈತ್ರಿ ಮಾಡಿಕೊಂಡಿದ್ದವು. ಈ ಮೈತ್ರಿ ಒಟ್ಟು ಮತಗಳಲ್ಲಿ ಶೇಕಡಾ 33 ರಷ್ಟು ಸಾಧನೆ ಮಾಡಿದೆ.