ಬೆಳಗಾವಿ: ಬಸವಣ್ಣರ ವಿಚಾರಧಾರೆಗಳ ಪ್ರಚಾರ ಪಡಿಸುತ್ತಾ ರಾಜ್ಯದಲ್ಲಿ ಖ್ಯಾತಿ ಗಳಿಸಿದ್ದ ನಿಜಗುಣಾನಂದ ಶ್ರೀಗಳಿಗೆ ಮತ್ತೆ ಬೆದರಿಕೆ ಪತ್ರ ಬಂದಿದೆ. ಜಿಲ್ಲೆಯ ಕಿತ್ತೂರು ತಾಲೂಕಿನ ಬೈಲೂರು ನಿಷ್ಕಲ ಮಂಟಪ ಶ್ರೀಗಳಾದ ನಿಜಾಗುಣಾನಂದ ಅವರಿಗೆ ಮತ್ತೆ ಪತ್ರಗಳು ಬಂದಿವೆ.
‘2020ರಲ್ಲಿ ನಿನ್ನ ಹತ್ಯೆ ತಪ್ಪಿರಬಹುದು 2023ರಲ್ಲಿ ತಪ್ಪಲ್ಲ, ನಿನ್ನ ಪಾಪದ ಕೊಡ ತುಂಬಿದೆ ಆದಷ್ಟು ಬೇಗ ನಿನ್ನ ತಿಥಿ, ನಿನ್ನ ಭಕ್ತರಿಗೆ ಹೇಳು. ನಮ್ಮ ಧರ್ಮದ ದೇವತೆಗಳನ್ನು ನಿಂದಿಸುವ ನಿನಗೆ ಘೋರ ಹತ್ಯೆಯೇ ಬರಲಿದೆ. ನಿನ್ನ ಅಂತಿಮ ದಿನಗಳು ಆರಂಭವಾಗಿವೆ, ಇನ್ನು ದಿನಗಳನ್ನ ಎಣಿಸು’ ಎಂದು ಪತ್ರದಲ್ಲಿ ಬೆದರಿಕೆ ಹಾಕಲಾಗಿದೆ.
ಇದನ್ನೂ ಓದಿ: ಸರ್ಕಾರದ ಯೋಜನೆ ಶ್ಲಾಘಿಸಿ ಪತ್ರ ಬರೆದಿದ್ದ ವಿದ್ಯಾರ್ಥಿನಿ ಭೇಟಿಯಾದ ಸಿಎಂ
ಇನ್ನೊಂದೆಡೆ ಈ ರೀತಿ ಜೀವ ಬೆದರಿಕೆ ಪತ್ರ ಬಂದಿದ್ದರೂ ಕಿತ್ತೂರು ಪೊಲೀಸರು ದೂರು ದಾಖಲಿಸಿಕೊಂಡಿಲ್ಲ ಎಂಬ ಆರೋಪ ಕೇಳಿಬಂದಿದೆ. ಈವರೆಗೆ ಶ್ರೀಗಳ ಹೆಸರಲ್ಲಿ 5ಕ್ಕೂ ಹೆಚ್ಚು ಬಾರಿ ಬೆದರಿಕೆ ಪತ್ರಗಳು ಮಠಕ್ಕೆ ಬಂದಿವೆ ಎಂದು ವರದಿಯಾಗಿದೆ.
ಸಿಎಂ ಹೇಳಿಕೆ ಬೆನ್ನಲ್ಲೇ ಬೆದರಿಕೆ ಪತ್ರ
ಕಳೆದ ಎರಡು ದಿನಗಳ ಹಿಂದೆ ಗೌರಿ ಲಂಕೇಶ್ ಅವರ ಪುಣ್ಯಸ್ಮರಣೆ ನಿಮಿತ್ತ ಆಯೋಜನೆಗೊಂಡಿದ್ದ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಮಾತನಾಡಿ, ಸಾಹಿತಿಗಳು, ಚಿಂತಕರಿಗೆ ಬೆದರಿಕೆ ಪತ್ರ ಬರುತ್ತಿರುವ ಪ್ರಕರಣಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಅಂತಹವರ ವಿರುದ್ಧ ಕಠಿಣ ಕ್ರಮಕ್ಕೆ ಸರ್ಕಾರ ಬದ್ಧವಾಗಿದೆ. ಅವರ ಹಿಂದೆ ಎಂತಹ ಶಕ್ತಿ ಇದ್ದರೂ ಅವರ ಮಟ್ಟಹಾಕುತ್ತೇವೆ ಎಂದಿದ್ದರು.
ಬೆದರಿಕೆ ಪತ್ರದಲ್ಲಿ ಏನಿದೆ?
ಓಂ ಶ್ರೀ ಕಾಳಿಕಾದೇವಿ ನಮಃ… ಓಂ ಶ್ರೀ ಕಾಳಿಕಾದೇವಿ ನಮಃ…
ನಿಜಗುಣನಂದಾ ನಿನ್ನ ಸಾವು 2020ರಲ್ಲಿ ತಪ್ಪಿರಬಹುದು. 2023 ರಲ್ಲಿ ತಪ್ಪುವುದಿಲ್ಲ. ನಿನ್ನ ಪಾಪದ ಮಾತಿನ ಕೊಡ ತುಂಬಿದೆ. ಅತಿ ಬೇಗ ನಿನ್ನ ತಿಥಿಗೆ ನಿನ್ನ ಭಕ್ತಾದಿಗಳಿಗೆ ಹೇಳು. ನಮ್ಮ ಧರ್ಮದೇವತೆಗಳನ್ನು ನಿಂದಿಸುವ ನಿನಗೆ ಘೋರವಾದ ಹತ್ಯೆಯೇ ಬರುತ್ತೆ. ನಿನ್ನ ಅಂತಿಮ ದಿನಗಳು ಪ್ರಾರಂಭವಾಗಿದೆ. ಇನ್ನೂ ದಿನಗಳನ್ನು ಮಾತ್ರ ಎಣಿಸು. ಓಂ ಶ್ರೀ ಕಾಳಿಕಾದೇವಿ ನಮಃ ಓಂ ಶ್ರೀ ಕಾಳಿಕಾದೇವಿ ನಮಃ ಸಹಿಷ್ಣು ಹಿಂದು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.