ಕಲಬುರಗಿ : ಪ್ರಧಾನಿ ನರೇಂದ್ರ ಮೋದಿ ಇದೇ ಜನವರಿ 19ಕ್ಕೆ ಕಲಬುರಗಿಗೆ ಆಗಮಿಸುತ್ತಿದ್ದು, ಈ ಹಿನ್ನೆಲೆ ಕಂದಾಯ ಸಚಿವ ಆರ್.ಅಶೋಕ ಜಿಲ್ಲೆಯ ಜನಪ್ರತಿನಿಧಿಗಳು ಮತ್ತು ಹಿರಿಯ ಅಧಿಕಾರಿಗಳೊಂದಿಗೆ ಪೂರ್ವಸಿದ್ಧತೆ ಪರಿಶೀಲನಾ ಸಭೆ ನಡೆಸಿದರು.
ಮಳಖೇಡ್‍ದಲ್ಲಿ ನಡೆಯಲಿರುವ ಬೃಹತ್ ಕಾರ್ಯಕ್ರಮದಲ್ಲಿ ಕಂದಾಯ ಇಲಾಖೆಯ ಇತಿಹಾಸದಲ್ಲಿಯೇ ಏಕಕಾಲದಲ್ಲಿ ಕಲಬುರಗಿ ಸೇರಿದಂತೆ ರಾಯಚೂರು, ಬೀದರ್, ಯಾದಗಿರಿ ಹಾಗೂ ವಿಜಯಪುರ ಜಿಲ್ಲೆಗಳ 51,900 ತಾಂಡಾ ನಿವಾಸಿಗಳಿಗೆ ಹಕ್ಕು ಪತ್ರ ವಿತರಣೆ ಮಾಡಲಿದ್ದು, ಕಾರ್ಯಕ್ರಮ ಶಿಷ್ಠಾಚಾರದಂತೆ ಅಚ್ಚುಕಟ್ಟಾಗಿ ನೆರವೇರುವಂತೆ ಎಲ್ಲಾ ಪೂರ್ವಸಿದ್ಧತೆ ಮಾಡಿಕೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ವಿಶೇಷವಾಗಿ ಕಾರ್ಯಕ್ರಮಕ್ಕೆ ಫಲಾನುಭವಿಗಳ ಹೊರತಾಗಿ ಸಾರ್ವಜನಿಕರು, ಮೋದಿ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುವುದರಿಂದ ಅಲ್ಲಲ್ಲಿ ಪ್ರವೇಶಕ್ಕೆ ಅವಕಾಶ ನೀಡಿ ಬ್ಯಾರಿಕೇಡ್ ಹಾಕಬೇಕು. ಯಾವುದೇ ರೀತಿಯಲ್ಲಿ ಕಾರ್ಯಕ್ರಮ ಸುತ್ತಮುತ್ತ ಮತ್ತು ರಾಜ್ಯ ಹೆದ್ದಾರಿಯಲ್ಲಿ ಜನದಟ್ಟನೆಯಾಗದಂತೆ ಸುಗಮ ಸಂಚಾರ ವ್ಯವಸ್ಥೆ ಮಾಡಬೇಕು ಎಂದು ಎಸ್.ಪಿ. ಇಶಾ ಪಂತ್ ಅವರಿಗೆ ನಿರ್ದೇಶನ ನೀಡಿದರು.
ನಂತರ ಸುದ್ದಿಗೊಷ್ಟಿಯಲ್ಲಿ ಮಾತನಾಡಿ, ಊಟಕ್ಕೆ 200 ಕೌಂಟರ್ ಸ್ಥಾಪಿಸಲಾಗುತ್ತಿದ್ದು, 600 ಬಾಣಸಿಗರು ಇರಲಿದ್ದಾರೆ. ಜಿಲ್ಲೆಯ ವಿವಿಧ ಸ್ಥಳಗಳಿಂದ ಫಲಾನುಭವಿಗಳನ್ನು ಕರೆತರಲು 2,582 ಸಾರಿಗೆ ಬಸ್ ವ್ಯವಸ್ಥೆ ಮಾಡಲಾಗಿದ್ದು, ಪ್ರತಿ ಬಸ್‍ಗೆ ಮತ್ತು ಫಲಾನುಭವಿಗಳನ್ನು ನೋಡಿಕೊಳ್ಳಲು ಗ್ರಾಮ ಲೆಕ್ಕಿಗರನ್ನು ನಿಯೋಜಿಸಲಾಗಿದೆ. ಮುಖ್ಯ ವೇದಿಕೆ ಜರ್ಮನ್ ಟೆಂಟ್‍ನಿಂದ ಕೂಡಿರಲಿದ್ದು, ಐದು ಕಡೆ ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.