ಬೆಂಗಳೂರು : ವಿಧಾನ ಪರಿಷತ್ ಸದಸ್ಯ ಬಿಕೆ ಹರಿಪ್ರಸಾದ್ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಟಾರ್ಗೆಟ್ ಮಾಡಿ ಮಾತನಾಡುತ್ತಿರುವುದು ಇದೀಗ ಪಕ್ಷದ ಆಂತರಿಕ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಈ ಕುರಿತು ಹರಿಪ್ರಸಾದ್ ವಿರುದ್ಧ ಕಿಡಿ ಕಾರಿರುವ ಸಚಿವ ಎಂಬಿ ಪಾಟೀಲ್, ಹರಿಪ್ರಸಾದ್ ಅವರ ಮಾತುಗಳನ್ನು ಪಕ್ಷ ಸೂಕ್ಷ್ಮವಾಗಿ ಅವಲೋಕಿಸುತ್ತಿದೆ, ಸಮರ್ಪಕವಾದ ತೀರ್ಮಾನ ಪಡೆಯಲಿದೆ. ಅವರೊಬ್ಬ ಹಿರಿಯ, ಅನುಭವಿ ರಾಜಕಾರಣಿಯಾಗಿದ್ದಾರೆ. ಹರಿಪ್ರಸಾದ್ ಅವರಿಂದ ಇಂತಹ ಮಾತು ಬರಬಾರದಿತ್ತು. ಅವರ ಟೀಕೆಗಳನ್ನು ಆಲಿಸಿಕೊಂಡು ಹೈಕಮಾಂಡ್ ನಾಯಕರು ಹಾಗೆ ಬಿಡುವುದಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಚರ್ಚ್‌ಸ್ಟ್ರೀಟ್‌ನಲ್ಲಿ ಸುತ್ತಾಡಿದ ನೆದರ್‌ಲ್ಯಾಂಡ್ಸ್ ಪ್ರಧಾನಿ
ಪಕ್ಷದ ಮುಂದೆ ಯಾರೂ ದೊಡ್ಡವರಲ್ಲ. ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಅವರೊಂದಿಗೆ ನೇರ ಸಂಪರ್ಕದಲ್ಲಿರುವ, ಅವರ ನಿಲುವು ಯಾವುದೇ ಇದ್ದರೂ ಅದನ್ನು ನೇರವಾಗಿ ಹೈಕಮಾಂಡ್ ಎದುರು ಮಾತನಾಡಬಹುದು. ಅದನ್ನೆಲ್ಲ ಹೊರತುಪಡಿಸಿ ಸಾರ್ವಜನಿಕವಾಗಿ ಬಹಿರಂಗ ಹೇಳಿಕೆ ನೀಡುವುದು ಒಬ್ಬ ನಾಯಕನಿಗೆ ಶೋಭೆ ತರುವಂತದ್ದಲ್ಲ. ಅವರು ಹೇಳಿಕೆಗಳ ಎಫೆಕ್ಟ್ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ನನ್ನ ಬಗ್ಗೆ ಉತ್ತಮ ಅಭಿಪ್ರಾಯ ತಿಳಿಸಿದ್ದಕ್ಕಾಗಿ ಹರಿಪ್ರಸಾದ್ ಅವರಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ. ಅವರು ಮಾತನಾಡಿರುವುದು ಅವರ ಸ್ವಂತ ನಿಲುವಾಗಿದೆ. ಈ ವಿಷಯದಲ್ಲಿ ನಾನು ಹೇಳುವುದಿಲ್ಲ ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ.
ನಮ್ಮ ಪಕ್ಷದಲ್ಲಿ ಯಾರನ್ನೂ ಕಡೆಗಣಿಸಿಲ್ಲ, ಯಾರಿಗೂ ಭೇದಭಾವ ಮಾಡಿಲ್ಲ. ಅವರ ಹೇಳಿಕೆಯಿಂದ ಪಕ್ಷದಲ್ಲಿ ಬಹಳಷ್ಟು ಡ್ಯಾಮೇಜ್ ಆಗಿದೆ. ಹರಿಪ್ರಸಾದ್ ಒಬ್ಬ ಉತ್ತಮ, ಪ್ರಬುದ್ಧ ರಾಜಕಾರಣಿಯಾಗಿದ್ದಾರೆ. ಪಕ್ಷದಲ್ಲಿ ಸ್ಥಾನ ಸಿಗುತ್ತದೆ, ಹೋಗುತ್ತದೆ. ಆದರೆ ಅವರು ಈ ರೀತಿ ಹೇಳಿಕೆಗಳನ್ನುನೀಡಬಾರದು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ಕುರಿ ಮೇಯಿಸುತ್ತಿದ್ದ ಬಾಲಕನನ್ನು ಶಾಲೆಗೆ ಕರೆತಂದ ಸಿಎಂ
ಅವರು ಯಾರ ಕುರಿತು ಟೀಕೆ ಮಾಡಿದ್ದಾರೋ, ಯಾರ ಬಗ್ಗೆ ಹೇಳಿಕೆ ನೀಡಿದ್ದಾರೋ, ಯಾವ ಹಿನ್ನೆಲೆಯಲ್ಲಿ ಹೇಳಿದ್ದಾರೋ ಅರ್ಥ ಆಗುತ್ತಿಲ್ಲ. ಆ ವೇದಿಕೆಯಲ್ಲಿ ಎಲ್ಲ ಪಕ್ಷದ ನಾಯಕರು ಇದ್ದರು, ಸ್ವಾಮೀಜಿಗಳು ಇದ್ದರು, ಬಹಿರಂಗ ಸಭೆಯಲ್ಲಿ ಈ ರೀತಿ ಹೇಳಿಕೆಗಳು ಹೊರಬರಬಾರದು ಎಂದು ಹೇಳಿದರು.
ಈಗಾಗಲೇ ಯಾವುದೇ ಹೇಳಿಕೆಗಳನ್ನು ಬಹಿರಂಗವಾಗಿ ನೀಡದಂತೆ ಹರಿಪ್ರಸಾದ್ ಅವರಿಗೆ ಹೈಕಮಾಂಡ್ ಎಚ್ಚರಿಸಿದೆ. ಅವರು ಮಾತನಾಡಿದ್ದು ತಪ್ಪು, ಅವರ ಅಸಮಾಧಾನ ಏನೆಂಬುದನ್ನು ತಿಳಿದುಕೊಳ್ಳಬೇಕಾಗಿದೆ ಎಂದು ಗುಂಡೂರಾವ್ ತಿಳಿಸಿದರು.
ಹರಿಪ್ರಸಾದ್ ಏನು ಹೇಳಿದ್ದರು..?
‘ನಾನು ಮಂತ್ರಿಯಾಗಿದ್ದರೆ ನಿಮ್ಮನ್ನೆಲ್ಲ ಭೇಟಿಯಾಗೋಕೆ ಆಗ್ತಿರಲಿಲ್ಲ. ನನ್ನನ್ನು ಮಂತ್ರಿ ಮಾಡದ್ದಕ್ಕೆ ರಾಜ್ಯದ ಮುಖ್ಯಮಂತ್ರಿಗಳಿಗೆ ಧನ್ಯವಾದ’ ಎಂದು ಹಿರಿಯ ಕಾಂಗ್ರೆಸ್ ನಾಯಕ ಬಿ.ಕೆ ಹರಿಪ್ರಸಾದ್ ಸಿಎಂ ಸಿದ್ದರಾಮಯ್ಯ ಅವರಿಗೆ ಟಾಂಗ್ ನೀಡಿದ್ದರು.
ನಗರದ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ಈಡಿಗ, ಬಿಲ್ಲವ, ನಾಮಧಾರಿ, ದೀವರು ಮತ್ತು ಅತಿ ಹಿಂದುಳಿದ ವರ್ಗಗಳ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಅವರು, ನಾನು 40 ವರ್ಷದ ಹಿಂದೆಯೇ ಕೊಳಚೆ ನಿರ್ಮೂಲನಾ ಮಂಡಳಿ ಅಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ. ನಮ್ಮಸಮುದಾಯದವರು ಕರ್ನಾಟಕದಲ್ಲಿ ಮಾತ್ರವಲ್ಲ, ಆಂಧ್ರ, ಕೇರಳದಲ್ಲೂ ಇದ್ದಾರೆ ಎಂದಿದ್ದರು.
ನಮ್ಮದು ಹಿಂದುಳಿದವರ ಒಕ್ಕೂಟ ಅಂದರೆ ನಂಬೋದಿಲ್ಲ. ನಾವು ಶೇ. 68ರಷ್ಟು ಜಿಎಸ್ ಟಿ ಕಟ್ಟುತ್ತಿದ್ದೇವೆ. ಮೇಲ್ಜಾತಿಯವರು ಕೇವಲ 10ರಷ್ಟು ಜಿಎಸ್ ಟಿ ಕಟ್ಟುತ್ತಿದ್ದಾರೆ. ರಾಜ್ಯದ ಬೊಕ್ಕಸಕ್ಕೆ ನಮ್ಮ ಕೊಡುಗೆ ಹೆಚ್ಚಿದೆ. ನಮ್ದು ವೋಟ್ ಹಾಕೋ ಟೀಮ್, ನೋಟ್ ಕೋಡೋರು ಟೀಮ್. ಆದರೆ, ಅಧಿಕಾರ ನಡೆಸೋರು ಬೇರೆ. ಬೋರ್ಡ್ ಚೇರ್ಮನ್ ಮಾಡುವುದಕ್ಕೂ ಹಿಂದೆ ಮುಂದೆ ನೋಡ್ತಾರೆ ಎಂದು ಅಸಾಮಾಧಾನ ಹೊರ ಹಾಕಿದ್ದರು.
ಈಡಿಗ, ಬಿಲ್ಲವ, ನಾಮಧಾರಿಗಳು ಏನೋ ಹೆಂಡ ಮಾರೋರು, ಇವರಿಗೆ ಏನು ಯೋಗ್ಯತೆ ಇದೆ ಅಂತ ಮಾತನಾಡ್ತಾರೆ. ಈ ರಾಜ್ಯದ ಭೂಗಳ್ಳರು ಈ ಮಾತುಗಳನ್ನು ಹೇಳ್ತಿದ್ದಾರೆ. ನಾವು 36 ಸಾವಿರ ಕೋಟಿ ರೂಪಾಯಿ ತೆರಿಗೆ ಕಟ್ಟುತ್ತಿದ್ದೇವೆ. ನಾವು ಯಾರ ಮುಲಾಜಲ್ಲೂ ಇಲ್ಲ. ಆದರೆ, ನಾನು ಯಾವತ್ತೂ ತಾಳ್ಮೆ ಕಳೆದುಕೊಂಡಿಲ್ಲ ಎಂದು ಹೇಳಿದ್ದರು.
ಕಾರಿನಲ್ಲಿ ಕೂತ ತಕ್ಷಣ ದೇವರಾಜ ಅರಸು ಆಗಲ್ಲ: ದೇವರಾಜ ಅರಸು ಅವರ ಜನ್ಮ ದಿನದಂದು ಸಿಎಂ ಸಿದ್ದರಾಮಯ್ಯ ಅರಸು ಅವರ ಹಳೆಯ ಕಾರಿನಲ್ಲಿ ಸುತ್ತಾಡಿದ್ದರು. ಈ ವಿಚಾರವನ್ನು ಪ್ರಸ್ತಾಪಿಸಿ ಟಾಂಗ್ ನೀಡಿದ ಹರಿಪ್ರಸಾದ್, ಅರಸು ಅವರ ಕಾರಿನಲ್ಲಿ ಕುಳಿತ ತಕ್ಷಣ ಯಾರೂ ಅವರ ಹಾಗೆ ಆಗಲ್ಲ. ಅರಸು ಅವರ ಚಿಂತನೆ ನಮ್ಮಲ್ಲಿ ಬರಬೇಕು. ಇವರ ಕೈಯಲ್ಲಿ ಅರಸು ಅವರ ಮೊಮ್ಮಗನನ್ನು ಎಂಎಲ್ ಸಿ ಮಾಡೋಕೆ ಆಗಿಲ್ಲ ಎಂದಿದ್ದರು.
ಇಂದಿರಾ ಗಾಂಧಿ, ಸೋನಿಯಾ ಗಾಂಧಿ, ರಾಜೀವ್ ಗಾಂಧಿ, ರಾಹುಲ್ ಗಾಂಧಿ, ಹೀಗೆ ಎಲ್ಲಾ ಗಾಂಧಿಗಳ ಜೊತೆ ನಾನು ಕೆಲಸ ಮಾಡಿದ್ದೇನೆ. ಆದರೆ, ಅಧಿಕಾರಕ್ಕಾಗಿ ಯಾರ ಬಳಿಯೂ ಹೋಗಿಲ್ಲ ಎಂದು ಹೇಳಿದ್ದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.