ಬೆಂಗಳೂರು: ಕಳೆದ ಎರಡು ದಿನಗಳಿಂದ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಇತರರು ‘ಮೇರಾ ಘರ್ ಆಪ್ಕಾ ಘರ್’ ಎಂದು ಟ್ವೀಟ್ ಮಾಡಿ, ರಾಹುಲ್ ಅವರನ್ನು ತಮ್ಮ ಮನೆಗಳಿಗೆ ಆಹ್ವಾನಿಸುತ್ತಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸಂಸದ ಸ್ಥಾನದಿಂದ ಅನರ್ಹಗೊಂಡಿರುವ ಕಾರಣ ಅಧಿಕೃತ ಬಂಗಲೆಯನ್ನು ಖಾಲಿ ಮಾಡುವಂತೆ ಲೋಕಸಭೆಯ ಕಾರ್ಯದರ್ಶಿಯಿಂದ ನೋಟಿಸ್ ನೀಡಲಾಗಿತ್ತು. ಹೀಗಾಗಿ ಕಾಂಗ್ರೆಸ್ ನಾಯಕರು ”ನಮ್ಮ ಮನೆ ನಿಮ್ಮ ಮನೆ”ಅಭಿಯಾನವನ್ನು ಪ್ರಾರಂಭಿಸಿದ್ದಾರೆ.
ಮಾಜಿ ಸಚಿವರಾದ ಕೆ.ಜೆ.ಜಾರ್ಜ್, ದಿನೇಶ್ ಗುಂಡೂರಾವ್, ಜಮೀರ್ ಅಹಮದ್, ಶಾಸಕ ರಿಜ್ವಾನ್ ಅರ್ಷದ್ ಮತ್ತಿತರರು ಮನೆ ಮುಂದೆ ನಿಂತು ನಮ್ಮ ಮನೆ, ನಿಮ್ಮ ಮನೆ ಎಂದು ಭಿತ್ತಿಪತ್ರ ಹಿಡಿದಿರುವ ಫೋಟೋಗಳು ವೈರಲ್ ಆಗಿವೆ.
ರಾಹುಲ್ ಗಾಂಧಿಯಂತಹ ವ್ಯಕ್ತಿಗೆ ಸರ್ಕಾರಿ ಬಂಗಲೆ ಅಗತ್ಯವಿಲ್ಲ. ಅವರು ನಮ್ಮ ಹೃದಯದಲ್ಲಿ ವಾಸಿಸುತ್ತಿದ್ದಾರೆ ಮತ್ತು ನಮ್ಮ ಮನೆಯಲ್ಲಿ ಉಳಿಯಲು ಸ್ವಾಗತಾರ್ಹ ಎಂದು ರಿಜ್ವಾನ್ ಟ್ವೀಟ್ ಮಾಡಿದ್ದಾರೆ.