ಚಿತ್ರದುರ್ಗ: ಭ್ರಷ್ಟಾಚಾರದ ಮೂಲ ಕರ್ತೃಗಳು ಕಾಂಗ್ರೆಸ್ ನಾಯಕರು ಎಂದು ಕೃಷಿ ಸಚಿವ ಹಾಗೂ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ ಪಾಟೀಲ್ ಹೇಳಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿ, ಕಾಂಗ್ರೆಸ್ ಪಕ್ಷ ಭ್ರಷ್ಟಾಚಾರದ ತವರು ಮನೆ. ಇನ್ನು ಕಾಂಗ್ರೆಸ್‌ನವರು ಅಧಿಕಾರಕ್ಕಾಗಿ ದೇಶದ್ರೋಹಿಗಳ ರಕ್ಷಣೆ ಮಾಡುತ್ತಿದ್ದಾರೆ. ಅಧಿಕಾರಕ್ಕಾಗಿ ದೇಶ ಒತ್ತೆಯಿಡಲೂ ಸಿದ್ಧರಾಗಿದ್ದಾರೆ ಎಂದು ಕಿಡಿಕಾರಿದ್ದಾರೆ.
ಬಿಜೆಪಿ ಸರ್ಕಾರ ತಮ್ಮ ಭ್ರಷ್ಟಾಚಾರ ಮುಚ್ಚಿ ಹಾಕಲು ಕುಕ್ಕರ್ ಬ್ಲಾಸ್ಟ್ ಪ್ರಕರಣವನ್ನು ದೊಡ್ಡದಾಗಿ ಮಾಡಿದರು ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ಮಂಗಳೂರಿನಲ್ಲಿ ಆಕಸ್ಮಿಕವಾಗಿ ಆಟೋದಲ್ಲಿ ಕುಕ್ಕರ್ ಸ್ಫೋಟವಾದ್ದರಿಂದ ದುರಂತ ತಪ್ಪಿದೆ. ಸಾರ್ವಜನಿಕ ಪ್ರದೇಶದಲ್ಲಿ ಸ್ಫೋಟ ಆಗಿದ್ದರೆ ಅದೆಷ್ಟು ಜನರ ಸಾವಾಗುತ್ತಿತ್ತು, ಎಷ್ಟೊಂದು ದೊಡ್ಡ ದುರಂತ ಸಂಭವಿಸುತ್ತಿತ್ತು. ಇಂಥಹ ದೇಶ ದ್ರೋಹಿಗಳನ್ನು ರಕ್ಷಣೆ ಮಾಡುವ ಮಾತು ನಾಚಿಕೆಗೇಡು.ಕಳ್ಳನ ಮನಸು ಹುಳ್ಳಹುಳ್ಳಗೆ ಎಂಬಂತೆ ಕಾಂಗ್ರೆಸ್ ನಾಯಕರ ವರ್ತನೆಯಾಗಿದೆ ಎಂದು ವಾಗ್ದಾಳಿ ನಡೆಸಿದರು.
ಇನ್ನು ಕುಕ್ಕರ್ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆಯ ತನಿಖೆಯಲ್ಲಿ ಸಾಕಷ್ಟು ಸಾಕ್ಷಿಗಳು ಪತ್ತೆ ಆಗಿದೆ. ಯಾವ ಸಂಘಟನೆಗಳ ಜೊತೆ ಆರೋಪಿಗೆ ನಂಟಿದೆ ಎಂದು ತಿಳಿದಿದೆ. ಕಾಂಗ್ರೆಸ್‌ನವರು ದೇಶದ್ರೋಹಿ, ಭಯೋತ್ಪಾದಕರ ರಕ್ಷಣೆಗೆ ಇಳಿದಿದ್ದು ನೋವಿನ ಸಂಗತಿ ಎಂದರು.