ಬೆಂಗಳೂರು : ಸರ್ವಪಕ್ಷ ಸಭೆಯಲ್ಲಿ ಎಲ್ಲರೂ ಸಂತೋಷದಿಂದ ಸಲಹೆ ಕೊಟ್ಟಿದ್ದಾರೆ, ಹೊರಗಡೆ ಬಂದು ವಿರೋಧ ಮಾತನಾಡುತ್ತಿದ್ದಾರೆ ಎಂದು ಕೃಷಿ ಸಚಿವ ಚೆಲುವರಾಯಸ್ವಾಮಿ ಹೇಳಿದರು.
ಕಾವೇರಿ ನೀರು ತಮಿಳುನಾಡಿಗೆ ಬಿಡುವ ವಿಚಾರವಾಗಿ ಬಿಜೆಪಿಯ ಟೀಕೆಗೆ ತಿರುಗೇಟು ನೀಡಿ ಮಾತನಾಡಿದ ಅವರು, ಕಾವೇರಿ ವಿಚಾರ ಕರ್ನಾಟಕವೇ ತೀರ್ಮಾನ ಮಾಡಿಕೊಳ್ಳಬೇಕು ಎಂದು ಬಿಜೆಪಿ ಹೇಳಿದೆ. ಇದು ಒಂದು ರಾಜ್ಯದ ಸಮಸ್ಯೆಯಾಗಿದ್ದರೆ ನಾವೇ ತೀರ್ಮಾನ ಮಾಡಿಕೊಳ್ಳುತ್ತಿದ್ದೆವು. ಇದು ಅಂತಾರಾಜ್ಯ ಸಮಸ್ಯೆಯಾಗಿರುವುದರಿಂದ ನಾವು ನಿರ್ಧಾರ ಮಾಡಲು ಆಗುವುದಿಲ್ಲ. ತೀರ್ಪು ಬಂದು ಐದು ವರ್ಷಗಳಾಗಿದ್ದರೂ, ಈ ಹಿಂದೆ ಅಧಿಕಾರದಲ್ಲಿದ್ದ ಬಿಜೆಪಿಯವರು ಏನು ಮಾಡುತ್ತಿದ್ದರು?. ಯಡಿಯೂರಪ್ಪ, ಬೊಮ್ಮಾಯಿ, ಕುಮಾರಸ್ವಾಮಿ ಏನು ಮಾಡಿದ್ದಾರೆ ಎಂದು ಪ್ರಶ್ನಿಸಿದರು.
ನಮ್ಮ ಅಧಿಕಾರಗಳು ಸಮರ್ಥರಿದ್ದಾರೆ. ಕಾವೇರಿ ವಿಚಾರದಲ್ಲಿ ದಿಟ್ಟ ಹೆಜ್ಜೆ ಇಟ್ಟಿದ್ದೇವೆ. ರೈತರಿಗೆ ಯಾವುದೇ ತೊಂದರೆ ಆಗದ ರೀತಿಯಲ್ಲಿ ನೋಡಿಕೊಳ್ಳುತ್ತೇವೆ. ವಿಷಯ ಮತ್ತೆ ನೀರು ನಿರ್ವಹಣಾ ಪ್ರಾಧಿಕಾರದ ಮುಂದೆ ಬರಲಿದೆ. ವಿಪಕ್ಷದವರು ಮಾತನಾಡುತ್ತಾರೆ ಎಂದು ನಾವು ಏನೇನೋ ಮಾಡಲು ಆಗುವುದಿಲ್ಲ. ಸರ್ವ ಪಕ್ಷದ ಸಭೆಯಲ್ಲಿ ನಿರ್ಧಾರ ಮಾಡಿದಂತೆ ಸರ್ವ ಪಕ್ಷಗಳ ನಿಯೋಗ ಪ್ರಧಾನಿ ಮೋದಿಯವರನ್ನು ಭೇಟಿ ಮಾಡಲಿದೆ ಎಂದರು.
ಇದನ್ನೂ ಓದಿ : ಕಾವೇರಿ ನದಿ ನೀರು ಹಂಚಿಕೆ ವಿವಾದ: ವಿಚಾರಣೆ ಮುಂದೂಡಿದ ಸುಪ್ರೀಂ!
ಬೆಳೆ ವಿಮೆ ವಿಚಾರವಾಗಿ ಮಾತನಾಡಿದ ಚೆಲುವರಾಯಸ್ವಾಮಿ, ಈಗಾಗಲೇ ಕೃಷಿ ಇಲಾಖೆ ಅಧಿಕಾರಿಗಳು ರೈತರಿಗೆ ಬೆಳೆ ವಿಮೆ ತಲುಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅವರ ಕೆಲಸ ಮೆಚ್ಚಿ ಪ್ರಧಾನಿಯವರು ಒಂದು ಅಭಿನಂದನಾ ಪತ್ರ ಕಳಿಸಿದ್ದಾರೆ. ಬಾಗಲಕೋಟೆ, ಗದಗ, ಬೆಳಗಾವಿ ತುಮಕೂರು ಜಿಲ್ಲೆಗಳ ರೈತರಿಗೆ ಬೆಳೆ ವಿಮೆ ಕೊಡಿಸಲಾಗಿದೆ. ಹಾಕಿದ್ದ ಬೆಳೆ ಒಣ ಹೋಗಿದ್ದಕ್ಕೆ ಬೆಳೆ ವಿಮೆ ಕೊಡಲಾಗಿದೆ ಎಂದು ಹೇಳಿದರು.
ಬರ ಪರಿಹಾರ ಸಂಬಂಧ ನಾವು ಉಪಸಮಿತಿಯ ಸಭೆ ನಡೆಸಿದ್ದೇವೆ. ಬರ ಪರಿಹಾರಕ್ಕೆ ಕೇಂದ್ರದಲ್ಲಿ ಒಂದಿಷ್ಟು ನಿಯಮಗಳಿಗೆ. ತೀವ್ರ ಬರ ಪೀಡಿತ ತಾಲೂಕಿನಲ್ಲಿ ಗ್ರೌಂಡ್ ಟ್ರೂಥ್ ವೆರಿಫಿಕೇಷನ್ ಮಾಡಲಾಗುತ್ತದೆ. ಅಧಿಕಾರಿಗಳು ಕೊಟ್ಟ ವರದಿ ಮೇಲೆ ಮತ್ತೊಂದು ಮೀಟಿಂಗ್ ಮಾಡುತ್ತೇವೆ. ಬರಗಾಲದ ಪರಿಸ್ಥಿತಿ ನಮಗೆ ಗೊತ್ತಿದೆ. ಹೀಗಾಗಿ ಒಂದು ಜಿಲ್ಲೆಗೆ ಒಬ್ಬರು ನೋಡಲ್ ಅಧಿಕಾರಿಯನ್ನು ನೇಮಕ ಮಾಡಲಾಗಿದೆ. ಅವರು ಜಿಲ್ಲಾ ಪ್ರವಾಸ ಕೈಗೊಂಡು ಪರಿಸ್ಥಿತಿ ಏನು ಅಂತ ಹೇಳ್ತಾರೆ. ನಾನು ಆಗಸ್ಟ್ 29ರಂದು ಚಿತ್ರದುರ್ಗಕ್ಕೆ ಹೋಗಿ ಪರಿಸ್ಥಿತಿ ಬಗ್ಗೆ ತಿಳಿದುಕೊಳ್ಳುತ್ತೇನೆ ಎಂದು ತಿಳಿಸಿದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.